ದ್ವೈತವಾದ -
  	ಪ್ರಪಂಚಕ್ಕೆ ಮೂಲವಾದುದು ಒಂದೇ ತತ್ತ್ವವೇ ಎರಡೇ ಎಂಬ ಚರ್ಚೆ ಬಳ ಹಿಂದಿನಿಂದ ನಡೆದಿದೆ.  ಒಂದೇ ತತ್ತ್ವದಿಂದ ಎಂಬ ವಾದವನ್ನು ಏಕತ್ವವಾದ (ನೋಡಿ- ಏಕತ್ವವಾದ) ಅಥವಾ ಏಕತತ್ತ್ವವಾದ ಎನ್ನುತ್ತಾರೆ.  ಎರಡರಿಂದ ಎನ್ನುವ ವಾದವನ್ನು ದ್ವೈತವಾದ, ದ್ವಿತತ್ತ್ವವಾದ (ಡ್ಯೂಯಲಿಸಂ) ಎನ್ನುತ್ತಾರೆ.  ಇಲ್ಲಿ ಪಾಶ್ಚಾತ್ಯ ಹಾಗೂ ಪುರಸ್ತ್ಯದಲ್ಲಿ ಈ ತತ್ತ್ವ ಹೇಗೆ ಬೆಳೆದು ಬಂದಿದೆ ಎನ್ನುವುದನ್ನು ತಿಳಿಸಲಾಗಿದೆ.

1 . ಪಾಶ್ವಾತ್ಯ
ಪಾಶ್ಚಾತ್ಯದಲ್ಲಿ ಡ್ಯೂಯಲಿಸಂ (ದ್ವಿತತ್ತ್ವವಾದ) ಎಂಬ ಪದ ನೀತಿ, ಮತ ಮತ್ತು ತತ್ತ್ವಶಾಸ್ತ್ರಗಳಲ್ಲಿ ಬಳಕೆಯಲ್ಲಿದೆ.  ನೀತಿಶಾಸ್ತ್ರದಲ್ಲಿ ಈ ಪದ ಮಾನವನ ಸಾಧು ಮತ್ತು ಅಸಾಧು ನಡತೆಗಳನ್ನು ಬೇರ್ಪಡಿಸುವಲ್ಲಿ ಬಳಕೆಯಾಗಿದೆ.  ಇನ್ನು ಮತವಿಚಾರ : ತಾಮಸ್ ಹೈಡ್ ಎಂಬ ಶಾಸ್ತ್ರಜ್ಞ ಜರತುಷ್ಟ್ರ ಮತವನ್ನು ಪರಿಶೀಲಿಸುತ್ತ ಅಲ್ಲಿ ಬರುವ ಅಹ್ರಿಮನ್ ಅಸಾಧು ವಿಷಯಗಳನ್ನೂ ಅಹುರ ಮಜ್ಡ ಸಾಧು ವಿಷಯಗಳನ್ನೂ ಪ್ರತಿನಿಧಿಸುತ್ತಾರೆಂದು ತಿಳಿಸಿ ಈ ಸಂದರ್ಭದಲ್ಲಿ ಡ್ಯೂಯಲಿಸಂ ಎಂಬ ಪದವನ್ನೂ ಬಳಸಿದ್ದಾನೆ.  ದೇವರು ಸಾಧುತ್ವದ ಪ್ರತೀಕ.  ಅವನ ಪ್ರಪಂಚದಲ್ಲಿ ಅಸಾಧುವಾದ್ದು ಬಹಳ ಇದೆ.  ಯಾವಾಗಲೂ ಅಸಾಧುವಾದ್ದನ್ನು ದೇವರು ಎಂಬ ಸಾಧುಭಾವಕ್ಕೆ ಸಂಗತವನ್ನಾಗಿ ಮಾಡುವುದು ಕಷ್ಟಸಾಧ್ಯ.  ದೇವರು ನಿರ್ದೋಷಿ, ಸಾಧು, e್ಞÁನಪೂರ್ಣ ಮತ್ತು ಸರ್ವಶಕ್ತ.  ಅವನ ಜಗತ್ತಿನಲ್ಲಿ ಅಸಾಧುವಾದ್ದು ಹೇಗೆ ಬಂದೀತೆಂಬುದೇ ಸಮಸ್ಯೆ.  ಈ ಸಮಸ್ಯೆಗೆ ಉತ್ತರ ಕೊಡುವ ಜೆ. ಎಸ್. ಮಿಲ್ ದೇವರ ಸಾಧುತ್ವವನ್ನು ಉಳಿಸಿಕೊಳ್ಳುವುದಕ್ಕೋಸ್ಕರ ಅವನ ಸರ್ವಶಕ್ತಿಯನ್ನು ಪ್ರಧಾನವನ್ನಾಗಿಸುವುದಿಲ್ಲ.  ಅಸಾಧುವಾದ್ದು ದೇವರಿಗೆ ಪೂರ್ತಿ ಅಧೀನವಲ್ಲವೆಂದು ಅವನ ಭಾವ.  ಹೀಗೆ ಅಸಾಧು ಸಾಧುಗಳಿಗೆ ಭೇದವಿರುವುದೆನ್ನುವ ಸ್ಥಾನದಲ್ಲಿಯೇ ಡ್ಯೂಯಲಿಸಂ ಇರುವುದು ಎನ್ನುತ್ತಾನೆ.  ಕ್ರೈಸ್ತ ಪರಿಭಾಷೆಯಲ್ಲಿ ಡ್ಯೂಯಲಿಸಂ ಪದ ಬಳಕೆಯಲ್ಲಿದೆ. ಯೇಸು ಕ್ರಿಸ್ತನಲ್ಲಿ ದೈವತ್ವ ಮಾನವತ್ವಗಳೆರಡೂ ಇರುವುದನ್ನು ಈ ಪದ ಸೂಚಿಸುತ್ತದೆ.

ತತ್ತ್ವಶಾಸ್ತ್ರದಲ್ಲಿ ಡ್ಯೂಯಲಿಸಂ ಎಂಬ ಪದ ಮೊಟ್ಟಮೊದಲು ಪ್ರಯೋಗವಾಗಿರುವುದು ಆಧುನಿಕ ತತ್ತ್ವಶಾಸ್ತ್ರದಲ್ಲಿ.  ವುಲ್ಫ್ ಎಂಬಾತ ಚೇತನಕ್ಕೂ ಅಚೇತನಕ್ಕೂ ಇರುವ ಪರಸ್ಪರ ವಿರೋಧವನ್ನು ಈ ಪದದಿಂದ ನಿರ್ದೇಶಿಸಿದ್ದಾನೆ.  ಅಲ್ಲದೆ ಈತ ತತ್ತ್ವವಿಚಾರಶೀಲರನ್ನು ಏಕತತ್ತ್ವವಾದಿಗಳು ದ್ವಿತತ್ತ್ವವಾದಿಗಳು ಎಂಬ ಪರಸ್ಪರ ವಿರೋಧವುಳ್ಳ ಎರಡು ಗುಂಪು ಮಾಡಿದ್ದಾನೆ.  

ಹ್ಯಾಮಿಲ್‍ಟನ್ ಎಂಬಾತ ವುಲ್ಫ್ ಹೇಳುವ ಮಾರ್ಗವನ್ನೇ ಅನುಸರಿಸಿ ಡ್ಯೂಯಲಿಸಂ ಪದಕ್ಕೆ ದ್ವೈತವಾದ ಎಂದು ಅರ್ಥಮಾಡುತ್ತಾನೆ.  ಈ ಪದವನ್ನು ರೀಡ್ ಮತ್ತು ಸ್ಕಾಟ್ಲೆಂಡಿನ ತತ್ತ್ವವಿಚಾರಶೀಲರು `ಪ್ರತ್ಯಕ್ಷ ವಿಷಯದಲ್ಲಿ ನಡೆಸಿದ ಸಂಶೋಧನಕ್ಕೆ ಅನ್ವಯಿಸಿ ಅದನ್ನು ಸ್ವಾಭಾವಿಕ ದ್ವೈತವಾದ ಎಂದು ವ್ಯವಹರಿಸುತ್ತಾರೆ.  ಇದಕ್ಕೆ ಸ್ವಾಭಾವಿಕ ಜಗತ್ಸತ್ಯತ್ವವಾದ ಎಂದೂ ಹೆಸರು.  ಈ ವಾದದಂತೆ ಪ್ರತ್ಯಕ್ಷe್ಞÁನದ ವಿಷಯ e್ಞÁನತತ್ತ್ವದಿಂದ ಯಾವ ವಿಕಾರವನ್ನೂ ಹೊಂದದೇ ಸಾಕ್ಷಾತ್ಕಾರರೂಪವಾದ e್ಞÁನಕ್ಕೆ ವಿಷಯವಾಗುವುದು.  ಎಂದರೆ ಈ e್ಞÁನದಲ್ಲಿ e್ಞÁನತತ್ತ್ವ ಮತ್ತು ಅಚೇತನವಾದ ವಿಷಯ ಈ ಎರಡೂ ಮಿಳಿತವಾಗುವುವು.  ಆದರೂ ಅವು ಪರಸ್ಪರ ಭಿನ್ನವೆಂದೂ ಒಂದು ಮತ್ತೊಂದಿಲ್ಲದೆ ಇರಲು ಸಾಧ್ಯ ಎಂದೂ ಈ ವಾದದ ಭಾವ.

ಇವರು ಆಧುನಿಕ ತತ್ತ್ವವಾದಿಗಳಲ್ಲಿ ಅನೇಕರನ್ನು ಅರ್ಥಾತ್ ಸಿದ್ದ ದ್ವೈತವಾದಿಗಳು ಎಂದು ವರ್ಗೀಕರಿಸುವರಲ್ಲದೆ ಅವರು ಸ್ವತಂತ್ರವಾದ ಬಾಹ್ಯ ಪ್ರಪಂಚವನ್ನು ಅಂಗೀಕರಿಸುವರಾದರೂ ಅದರ ಸಾಕ್ಷಾತ್ಕಾರ ಉಂಟೆಂದು ಮಾತ್ರ ಹೇಳುವುದಿಲ್ಲ ಎಂದು ತಿಳಿಸುತ್ತಾರೆ.

ಈ ವಿಚಾರಗಳಿಂದ ಒಟ್ಟಿನಲ್ಲಿ, ತತ್ತ್ವಶಾಸ್ತ್ರದಲ್ಲಿ ಡ್ಯೂಯಲಿಸಂ ಎಂದರೆ ಚೇತನ ಮತ್ತು ಅಚೇತನ ಎಂಬ, ನಿತ್ಯವಾಗಿ ಪರಸ್ಪರ ಅನಧೀನವಾಗಿ ಜೊತೆಯಲ್ಲಿರುವ ಎರಡು ತತ್ತ್ವಗಳನ್ನು ಸಿದ್ಧಾಂತಿಸುವ ವಾದ ಎಂಬ ಅರ್ಥ ಸಿದ್ಧಿಸುವುದು.  ಈ ವಾದದಲ್ಲಿ ಎರಡು ಕ್ರಮಗಳಿವೆ.  1 ಚೇತನ ಮತ್ತು ಅಚೇತನ ಇವು ಆತ್ಯಂತಿಕವಾಗಿ ಪರಸ್ಪರ ವಿಜಾತೀಯ: ಈ ನಿಮಿತ್ತದಿಂದ ಅವಕ್ಕೆ ಕಾರ್ಯಕಾರಣಭಾವ ಅಸಂಭಾವ್ಯ.  2. ಚೇತನ ಕಾರ್ಯಕಾರಣಭಾವ ಎಂಬ ತನ್ನಲ್ಲಡಗಿರುವ ನಿಯಮವನ್ನು ಅನುಸರಿಸಿ ಇಂದ್ರಿಯದಿಂದ ಹುಟ್ಟುವ e್ಞÁನಕ್ಕೆ ಮೂಲವಾಗಿ ಒಂದು ಬಾಹ್ಯಪ್ರಪಂಚವನ್ನು ಆವಶ್ಯಕವನ್ನಾಗಿ ಮಾಡಲೇಬೇಕಾದರೂ ಆ ಬಾಹ್ಯಪ್ರಪಂಚ ತನ್ನಲ್ಲಿ ತಾನು ಯಾವ ರೂಪವುಳ್ಳದ್ದು ಎಂಬುದನ್ನು ಮಾತ್ರ ಅದು ತಿಳಿಯಲಾರದ್ದೂ ತನಗೂ ಅಚೇತನಕ್ಕೂ ಇರುವ ಕಂದಕವನ್ನು ದಾಟಲಾರದ್ದೂ ಆಗಿರುವುದು.  ಇದರಿಂದ ತಿಳುವಳಿಕೆಯೇ ವ್ಯಾಪಾರವಾಗಿ ಉಳ್ಳ ಚೇತನಕ್ಕೆ ಬಾಹ್ಯ ಪ್ರಪಂಚ ಮೂಲ ಅನಿವಾರ್ಯವಾಗಬೇಕೆಂಬುದು ವ್ಯಕ್ತವಾಗುವುದಾದರೂ ಈ ವಾದ ಅಚೇತನವಸ್ತು ಒಂದಿದೆ. ಅದು ಈ ರೂಪವುಳ್ಳದ್ದು ಎಂದು ಸಿದ್ಧಾಂತಿಸಲು ಅಸಮರ್ಥವಾಗಿರುವುದು.  ಈ ಕಾರಣದಿಂದ ಈ ಮಟ್ಟಿಗೆ ಅದು ಒಂದು ರೀತಿ ಏಕತತ್ತ್ವವಾದವೇ ಆಯಿತು ಎಂದು ತಿಳಿಯಲು ಅವಕಾಶವಿರುವುದು.  ಬಾಹ್ಯಪ್ರಪಂಚ ತನ್ನಲ್ಲಿ ಯಾವ ಸ್ವರೂಪವುಳ್ಳದು ಎಂದು ತಿಳಿಯುವುದು ಸಾಧ್ಯವಿಲ್ಲದಿದ್ದರೂ ಅದು ಚೇತನದ e್ಞÁನವೆಂಬ ವ್ಯಾಪಾರಕ್ಕೆ ಮೂಲ ಎಂಬ ಆಕಾಶದಲ್ಲಿ ಸಿದ್ಧಿಸುವುದು.  ಹೀಗೆ ಸಿದ್ಧವಾದ ಅದು ದ್ವೈತವಾದಕ್ಕೆ ಅವಕಾಶ ಕೊಡುವುದಿಲ್ಲ.  ಆದ್ದರಿಂದ ಅದು ಏಕತತ್ತ್ವವಾದದ ಆಕಾರಭೇದವೇ ಆಗಿರುವುದು.

ಮೇಲೆ ಕಂಡ ವಿಚಾರಗಳಿಂದ ಮತ್ತೊಂದು ಸಮಸ್ಯೆ ಹುಟ್ಟುವುದು.  e್ಞÁನ ಎರಡು ವಿಧ - ಐಂದ್ರಿಯ ಮತ್ತು ಮಾನಸಿಕ ಎಂದು. ಐಂದ್ರಿಯ e್ಞÁನ ಇಡೀ e್ಞÁನಪ್ರಪಂಚದ ಏಕದೇಶ ಮಾತ್ರ.  ಅದು ಕ್ಷಣಿಕ ಮತ್ತು ವೈಯಕ್ತಿಕ.  ಸ್ಮರಣ.  ಇದು ಆವಶ್ಯಕ ಎಂದು ತಿಳಿಯುವುದಕ್ಕೆ ಮೂಲಭೂತವಾದ ನಿಯಮಗಳು,  ಇದಕ್ಕೆ ಇದು ಸದೃಶ ಎಂಬ ಭಾವ, ಈ ಧರ್ಮ ಎಲ್ಲ ವಸ್ತುಗಳಲ್ಲಿಯೂ ಅನುಗತ ಎಂಬ ನಿರ್ಣಯ - ಇವು ಇಂದ್ರಿಯಗಳಿಂದ ಬಂದುವಲ್ಲವೆಂಬುದು ಸ್ಪಷ್ಟ. ಇವು ಬಾಹ್ಯಪ್ರಪಂಚ ಧರ್ಮಗಳೂ ಅಲ್ಲ.  ಅಥವಾ ಇವು ಚೇತನದಲ್ಲಿಯೇ ಅಡಗಿ ಇಂದ್ರಿಯಗಳಿಂದ ಗೃಹೀತವಾದ ವಸ್ತುಗಳನ್ನು ಅವಕ್ಕೆ ಸಂಗತವಾದ ರೀತಿಯಲ್ಲಿ ಜೋಡಿಸುವುವು ಎಂದು ತಿಳಿಯಲೂ ಸಾಧ್ಯವಿಲ್ಲ. ಚೇತನ ಇಂದ್ರಿಯಗಳ ವ್ಯಾಪಾರಕ್ಕೋಸ್ಕರ ರಚಿತವಾದ ಪದಾರ್ಥವಲ್ಲ.  ಈ ನಿಮಿತ್ತಗಳಿಂದ ಬಾಹ್ಯವೂ ಅಲ್ಲದ ಚೇತನವೂ ಅಲ್ಲದ ಈ ಧರ್ಮಗಳು ಹೇಗೆ ಪ್ರಸಕ್ತವಾದುವು ಎಂಬುದೇ ಸಮಸ್ಯೆ.  ಇದಕ್ಕೆ ದ್ವೈತವಾದವಂತೂ ಪರಿಹಾರವಲ್ಲ.

ಹೀಗೆ ದ್ವೈತವಾದ ವಿಧಿಮುಖವಾಗಿ ಅಥವಾ ನಿಷೇಧಮುಖವಾಗಿ ಆಧುನಿಕ ತತ್ತ್ವಶಾಸ್ತ್ರಗಳ ಬೆಳವಣಿಗೆಗೆ ಸಾಧನವಾಯಿತು.  ಆಧುನಿಕ ತತ್ತ್ವಶಾಸ್ತ್ರಗಳ ಪೂರ್ವರಂಗದಲ್ಲಿ ಪಾಶ್ಚಾತ್ಯ ತತ್ತ್ವಶಾಸ್ತ್ರಗಳ ಚರಿತ್ರೆ ಆರಂಭದಿಂದಲೂ ದ್ವೈತವಾದಕ್ಕೆ ಅಥವಾ ಅದರ ಪರಿಹಾರಕ್ಕೆ ಅಡಿಗಲ್ಲಾಗಬಹುದಾದ ಭಾವಗಳು ಪ್ರಸಕ್ತಿಗೆ ಬಂದಿದ್ದುವು.  ಈ ಭಾವಗಳನ್ನು ಉಲ್ಲೇಖಿಸುವ ತತ್ತ್ವಶಾಸ್ತ್ರ ಚರಿತ್ರೆಯನ್ನು ಇಲ್ಲಿ ಸಂಗ್ರಹಿಸಿದೆ.

ಅಯೋನಿಯನ್ ಪಂಥದವರು ಎಂದು ಪ್ರಸಿದ್ಧರಾದ ಪ್ರಾಚೀನ ತತ್ತ್ವ ವಿಚಾರಶೀಲರು ಅನುಭವಕ್ಕೆ ವಿಷಯವಾದ ಎಲ್ಲ ವಸ್ತುಗಳಿಗೂ ಒಂದೇ ಮೂಲವೆಂದು ಭಾವಿಸಿದರು.  ಈ ಮೂಲವನ್ನು ತೇಜಸ್ ಉದರ ಇಲ್ಲವೆ ವಾಯು ಎಂದು ಕರೆದರು.  ಇದು ಏಕತತ್ತ್ವವಾದದ ಪ್ರಭೇದವೇ ಆಗಿದೆಯಾದರೂ ದ್ವೈತವಾದ ಅದರಲ್ಲಿ ಅಡಗಿ ಜಡವಾದ ತೇಜಸ್ ಮುಂತಾದುವು ಪ್ರಪಂಚದ ಮೂಲ ಆಗುವುದು ಹೇಗೆ ಎಂಬ ಪ್ರಶ್ನೆ ಅವಶಿಷ್ಟವಾಯಿತು.  ಪ್ರಪಂಚ ಚೇತನರನ್ನೂ ಒಳಗೊಂಡಿರುವುದು.  ಈ ನಿಮಿತ್ತದಿಂದ ಜಡವಲ್ಲದ ಕಾರಣವನ್ನು ಅದು ಅಪೇಕ್ಷಿಸುವುದು.  ಈ ಅಂಶವೇ ಮೇಲೆ ಕಂಡ ಪ್ರಶ್ನೆಗೆ ನಿಮಿತ್ತ.

ಅನ್ಯಾಕ್ಸ್ಯಗರಸ್ ಈ ಪ್ರಶ್ನೆಗೆ ಉತ್ತರವಾಗಿ ಜಡವಸ್ತುವಿನ ಮೇಲೆ ವ್ಯಾಪಾರಮಾಡಿ ಪ್ರಪಂಚದಲ್ಲಿ ಬದಲಾವಣೆಯನ್ನೂ ವೃದ್ದಿಯನ್ನೂ ತೋರಿಸುವ ತತ್ತ್ವವನ್ನು ನೂಸ್ ಎಂಬ ಹೆಸರಿನಲ್ಲಿ ಸಿದ್ಧಾಂತಿಸಿದ.  ಆದರೆ ಈತ ತಿಳಿದಂತೆ ಈ ತತ್ತ್ವ ಜಡವಸ್ತುವಿನ ಅತಿ ಸೂಕ್ಷ್ಮ ರೂಪವೇ ಆಗಿತ್ತು. ಈ ಭಾವದಲ್ಲಿ ಜಗತ್ತಿನ ಕಾರಣ ಕೇವಲ ಜಡವಲ್ಲವಾದರೂ ಸೂಕ್ಷ್ಮವಾದ ಮತ್ತೊಂದು ಎಂಬ ದ್ವೈತವಾದ ಅಡಗಿದೆ.

ಅನಂತರ ಪ್ರಸಕ್ತವಾದ ಪ್ಲೇಟೊನ ತತ್ತ್ವಶಾಸ್ತ್ರದಲ್ಲಿ ದ್ವೈತವಾದ ಪರಿಹಾರದ ಪ್ರಯತ್ನವಿದ್ದರೂ ಅದು ಒಂದು ಬಗೆಯ ಸ್ಪಷ್ಟತೆಯನ್ನು ಪಡೆಯಿತು.  ಈತ ವಾಸ್ತವವಾಗಿ ಇರುವ ವಸ್ತುಗಳೆಂದರೆ ಭಾವಗಳು ಎಂದು ನಿರ್ಣಯಿಸಿದ. ಆದರೂ ಅದರಿಂದ ಜಗತ್ ಉಂಟಾಗಬೇಕಾದರೆ ವಾಸ್ತವವಲ್ಲದ, ಅಪೂರ್ಣ ಮತ್ತು ಸದೋಷ ಐಂದ್ರಿಯ ವಸ್ತುಗಳು ಬೇಕೆಂದು ವಾದಿಸಿದ.  ಈ ವಾಸ್ತವವಲ್ಲದುದನ್ನು ಈತ ಅಸಾಧು ನಡತೆಗೆ ಸಾಧನವೆಂದು ತೋರಿಸಿ ತನ್ನದೇ ಆದ ನೀತಿಶಾಸ್ತ್ರವನ್ನು ರೂಪಿಸಿದ.  ಈ ವಿಚಾರಗಳ ಔಚಿತ್ಯ ಹೇಗೇ ಇರಲಿ. ಈತ ತನ್ನ ವಿಚಾರ ಸರಣಿಯಲ್ಲಿ ವಾಸ್ತವವಲ್ಲದುದಕ್ಕೂ ಒಂದು ವ್ಯಕ್ತಿತ್ವವನ್ನು ಕಲ್ಪಿಸಿದ್ದಾನೆ.  ಒಟ್ಟಿನಲ್ಲಿ ಈತನ ಸಿದ್ಧಾಂತದಲ್ಲಿ ವಾಸ್ತವ ಮತ್ತು ವಾಸ್ತವವಲ್ಲದ ಎರಡು ವಸ್ತುಗಳು ಪ್ರಪಂಚಕಾರಣವೆಂದು ರೂಪಿತವಾಗಿರುವುದರಿಂದ ಪರ್ಯಾವಸನದಲ್ಲಿ ಈತ ದ್ವೈತವಾದವನ್ನೇ ಪುಷ್ಟೀಕರಿಸಿದಂತಾಯಿತು.  

ಪ್ಲೇಟೊನ ತತ್ತ್ವದೃಷ್ಟಿಯಲ್ಲಿ ಕಂಡುಬಂದ ದ್ವಿತತ್ತ್ವವಾದವನ್ನು ಅರಿಸ್ಟಾಟಲ್ ವಿರೋಧಿಸಿದ.  ಜಗತ್ತಿನಲ್ಲಿ ಎಲ್ಲೆಲ್ಲಿಯೂ ಕಂಡುಬರುವ ವೃದ್ಧಿಗೆ ಪ್ಲೇಟೊ ಸಿದ್ಧಾಂತದಲ್ಲಿ ಸ್ಥಾನವಿಲ್ಲವೆಂದು ತೋರಿಸಿದ.  ಮಾನವ ಜೀವನದಲ್ಲಿ ಕಂಡುಬರುವ ಉತ್ತಮ ಗುಣಗಳು ನಿರಂತರವೃದ್ಧಿಹೊಂದುವಂತೆ ಮಾಡುವುದೇ ತತ್ತ್ವನಿರೂಪಣದ ಮುಖ್ಯ ಉದ್ದೇಶ ಎಂದು ವಾದಿಸಿದ.  ಈ ಉದ್ದೇಶ ಸಾಧನೆಗೋಸ್ಕರ ಪ್ಲೇಟೊ ಸಿದ್ಧಾಂತದ ಮುಖ್ಯ ಭಾಗಗಳಲ್ಲಿ ಪರಿಣಾಮಕಾರಿಯಾದ ಕೆಲವು ಬದಲಾವಣೆಗಳ ಆವಶ್ಯಕತೆಯನ್ನು ನಿರೂಪಿಸಿದ.  ಫ್ಲೇಟೊನ ಭಾವಗಳ ಸ್ಥಾನದಲ್ಲಿ ಸಂಸ್ಥಾನ ಎಂಬ ತತ್ತ್ವವನ್ನು ಈತ ಅಂಗೀಕರಿಸಿ ಅದೇ ವೃದ್ಧಿಯನ್ನು ನಿರ್ವಹಿಸುವ ತತ್ತ್ವ ಎಂದು ನಿರೂಪಿಸಿದ.  ಪ್ಲೇಟೊ ಸತ್ಯವಲ್ಲವೆಂದು ಭಾವಿಸಿದ ಐಂದ್ರಿಯ ವಸ್ತುವನ್ನು ಈತ ಸತ್ಯವೆಂದೂ ವೃದ್ಧಿಸಾಧ್ಯತೆಯ ಗುರುತು ಎಂದೂ ರೂಪಿಸಿದ.  ಈ ವಾದದಲ್ಲಿ ದ್ವಿತತ್ತ್ವ ಸಂಬಂಧವಿಲ್ಲವೆಂದು ಈತನ ತಾತ್ಪರ್ಯ. ಆದರೂ ಜಡ ವೃದ್ದಿಯ ಕೇವಲ ಸಾಧ್ಯತೆಯಲ್ಲ.  ಜಗತ್ತು ಮತ್ತು ಮನುಷ್ಯರಲ್ಲಿ ಅದು ವೃದ್ಧಿಗೆ ನಿಯಾಮಕವಾದ ಸಂಸ್ಥಾನಕ್ಕೆ ಅಡ್ಡಿಬರುವುದು.  ಈ ನಿಮಿತ್ತದಿಂದ ವೃದ್ಧಿ ಒಂದು ಕ್ರಮವುಳ್ಳದ್ದಾಗುವುದು.  ಇದು ಅನುಭವಸಿದ್ಧ.  ಈ ಕಾರಣದಿಂದ ಜಡವಸ್ತು ಸಂಸ್ಥಾನದ ಜೊತೆಯಲ್ಲಿ ಜಗತ್ತಿನ ಎರಡನೆಯ ಕಾರಣ ಎಂದು ಪರಿಗಣಿಸಲೇಬೇಕಾದುದು. ಈ ರೀತಿಯಲ್ಲಿ ಪ್ಲೇಟೊ ಸಿದ್ಧಾಂತ ದ್ವೈತವಾದವೇ ಆಯಿತು ಎಂದು ತೋರಿಸಿದ.  

ದ್ವೈತವಾದಕ್ಕೆ ಅವಕಾಶ ಕೊಡದ ರೀತಿಯಲ್ಲಿ ಪ್ಲೇಟೊಸಿದ್ಧಾಂತವನ್ನು ರೂಪಿಸಲು ನಿಯೋಪ್ಲೇಟೋನಿಸಂ ಎಂಬ ಹೆಸರಿನಲ್ಲಿ ಕೆಲವರು ಸಾಧುತ್ವ ಎಂಬ ಭಾವವನ್ನು ದೇವತಾ ಸ್ಥಾನಕ್ಕೆ ತಂದರು. ಅದರ ಮಹಿಮೆಯಿಂದ ಅವ್ಯಕ್ತವಾದುದು ವ್ಯಕ್ತವಾಗುವುದೆಂದೂ ಈ ವ್ಯಕ್ತೀಭಾವಕ್ಕೆ ಜಡವಸ್ತು ಉಪಯುಕ್ತವಾದುದೆಂದೂ ವಾದಿಸಿದರು.  ಆದರೂ ಜಡವಸ್ತು ಉಪಯುಕ್ತ ಎಂದು ಹೇಳುವ ಮಟ್ಟಿಗಾದರೂ ದ್ವೈತವಾದಕ್ಕೆ ಅವಕಾಶ ತಪ್ಪಲಿಲ್ಲ.

ಕ್ರೈಸ್ತವಾದ ಜಡವನ್ನು ದೇವರು ಸೃಷ್ಟಿಸಿದನೆಂದು ಹೇಳುವುದರ ಮೂಲಕ ದ್ವೈತವಾದವನ್ನು ಪರಿಹರಿಸಿತು.  ಆದರೂ ಕ್ರೈಸ್ತ ತತ್ತ್ವಜ್ಞರ ವೈರಾಗ್ಯ, ಸಂನ್ಯಾಸ, ಪಾರಲೌಕಿಕ ಶ್ರೇಯಸ್ಸನ್ನು ಪಡೆಯುವುದರಲ್ಲಿ ಶ್ರದ್ಧೆ - ಇವುಗಳಲ್ಲಿ ದ್ವೈತವಾದದ ಪ್ರಭಾವ ಕಂಡುಬರುತ್ತದೆ.

ಮಧ್ಯಕಾಲೀನ ತತ್ತ್ವವಾದಿಗಳು ಸಂಪ್ರದಾಯ ಕ್ರಮದಲ್ಲಿ ಬಂದ ಆಚಾರ ವ್ಯವಹಾರಗಳಲ್ಲಿ ಆಸಕ್ತಿಹೊಂದಿ ದ್ವೈತವಾದವನ್ನು ಪುಷ್ಟೀಕರಿಸಿದರು.

ಆಧುನಿಕ ನಾಗರಿಕತೆಗೆ ಪ್ರವರ್ತಕವಾದ ತತ್ತ್ವವಿಚಾರವನ್ನು ಸರ್ವವಿಷಯಗಳಲ್ಲಿಯೂ ಎತ್ತಿಹಿಡಿಯುವ ವ್ರತವುಳ್ಳ ವಿದ್ವಾಂಸರು ದ್ವೈತವಾದ ಕೇವಲ ನಂಬಿಕೆಯ ಆಧಾರದಿಂದ ಬಂದುದೆಂಬುದನ್ನು ಗ್ರಹಿಸಿ ಸರ್ವಥಾ ಅದನ್ನು ತಪ್ಪಿಸುವ ಉದ್ದೇಶವುಳ್ಳವರಾದರು.  ಅವರಲ್ಲಿ ಬ್ರೂನೊ ಮತ್ತು ಪ್ಯಾರಾಸೆಲಸ್ ಮುಂತಾದವರು ಚೇತನಾಚೇತನ ವಸ್ತುಗಳ ಏಕೀಭಾವವೇ ಪ್ರತ್ಯನುಭವದಲ್ಲಿಯೂ ಕಂಗೊಳಿಸುವುದೆಂದು ಸಿದ್ಧಾಂತಿಸಿದರು.  

ಬೇಕನ್ ಮತ್ತು ಡೇಕಾರ್ಟ್ ಆಧುನಿಕ ವೈe್ಞÁನಿಕ ಹಿನ್ನೆಲೆಯಲ್ಲಿ ಮಾಡಿದ ಶೋಧನ ತಾತ್ತ್ವಿಕ ಸಮಸ್ಯೆಗಳನ್ನು ಹಿಂದಕ್ಕೆ ತಳ್ಳಿತು.  ಜಡವಸ್ತುಗಳಿಗೆ ಸಂಬಂಧಿಸಿದ ಆ ಮೂಲ ನಿಯಮಗಳನ್ನು ಕಂಡುಹಿಡಿಯುವುದು ಇವರ ಪ್ರಧಾನ ಉದ್ದೇಶವಾಗಿತ್ತು.  ಪ್ರಪಂಚಾನುಭವಕ್ಕೆ ಸಂಬಂಧಿಸಿದ ಮೂಲ ಸಮಸ್ಯೆಗಳನ್ನು ಇವರು ಚೇತನ ಮತ್ತು ಅಚೇತನ ಎಂಬ ಎರಡು ಸ್ವತಂತ್ರ ತತ್ತ್ವಗಳನ್ನು ಆಶ್ರಯಿಸಿ ಪರಿಹರಿಸುವ ಪ್ರಯತ್ನ ಮಾಡಿದರು.  ಇವೆರಡೂ ಸ್ವತಂತ್ರವಾದರೂ ದೇವರ ಮಹಿಮೆಯಿಂದ ಪರಸ್ಪರಾನುಗುಣವಾಗಿ ವ್ಯಾಪಾರ ಮಾಡುವುವೆಂದು ಹೇಳಿದರು. ಇದರಿಂದ ದ್ವೈತವಾದ ಮತ್ತಷ್ಟು ಬಲಗೊಂಡಿತು.  
ಸ್ಪಿನೋಜû ದ್ವೈತವಾದವನ್ನು ತಪ್ಪಿಸಿಕೊಳ್ಳಲು ಚೇತನಾಚೇತನಗಳು ಒಂದು ಮೂಲದ್ರವ್ಯದ ಎರಡು ಆಕಾರ ಮಾತ್ರವೆಂದು ಸಿದ್ಧಾಂತಿಸಿದ.  ಲೈಬ್ನಿಟ್ಸ್ ಕ್ರಮಬದ್ಧವಾದ ಮತ್ತು ಈಶ್ವರನನ್ನೇ ಕೊನೆಯಾಗಿ ಉಳ್ಳ ಚೇತನ ವಸ್ತುಗಳಿಂದಲೇ ಅನುಭವವನ್ನು ನಿರ್ವಹಿಸುವ ಪ್ರಯತ್ನವುಳ್ಳವನಾಗಿ ಬ್ರೂನೊ ಮತ್ತು ಪ್ಯಾರಾಸೇಲಸ್ ಆರಂಭಿಸಿದ ಏಕತತ್ತ್ವವಾದದ ಕಡೆ ಗಮನಹರಿಸಿದ. 
ಬ್ರಿಟನ್ನಿನಲ್ಲಿ ಜಾನ್ ಲಾಕ್ ಚೇತನಾಚೇತನಗಳು ಸ್ವತಂತ್ರವೆಂದು ವಾದಿಸಿ ಡೇಕಾರ್ಟ್‍ಗೆ ಬಲ ಕೊಟ್ಟ.  ವಿಷಪ್ ಬಾಕ್ರ್ಲೆ ಅಚೇತನ ವಸ್ತುವೇ ಇಲ್ಲವೆಂದು ಹೇಳಿ ವಿe್ಞÁನವಾದವನ್ನು ಸಾಧಿಸಿದ.  ಡೇವಿಡ್ ಹ್ಯೂಂ ಚೇತನ ವಸ್ತುವನ್ನು ತಿರಸ್ಕರಿಸಿದ.
ಜರ್ಮನಿಯಲ್ಲಿ ಇಮ್ಯಾನ್ಯುಯಲ್ ಕಾಂಟ್ ವಸ್ತು ತಾನು ಅನುಭವಕ್ಕೆ ಬರುವ ರೀತಿಯಲ್ಲಿ ತನ್ನಲ್ಲಿ ತಾನು ಇಲ್ಲ ಎಂದು ವಾದಿಸಿ ದ್ವೈತವಾದವನ್ನು ಅನಿವಾರ್ಯ ಮಾಡಿದ.

ವಿಲಿಂiÀiಂ ಮೆಕ್‍ಡೂಗಲ್ ಅಚೇತನದಂತೆ ಚೇತನವೂ ಒಂದು ವಸ್ತು ಎಂದು ಸಿದ್ಧಾಂತಿಸುವ ಮೂಲಕ ದ್ವೈತವಾದವನ್ನು ಮುಂದುವರಿಸಿದ.

18 ನೆಯ ಶತಮಾನದ ವಿe್ಞÁನ ವಿಚಾರದಲ್ಲಿ ವಸ್ತು ಎಂಬ ಭಾವಕ್ಕೆ ಪ್ರಾಶಸ್ತ್ಯ ಕಡಿಮೆಯಾಗುತ್ತ ಬಂದು ಏಕತತ್ತ್ವವಾದ ದ್ವಿತತ್ತ್ವವಾದಗಳು ಬೇರೆ ಬೇರೆ ಆಕಾರಗಳನ್ನು ತಾಳಿದವು.  ಚೇತನ ಮತ್ತು ಅಚೇತನ ಎಂದು ವ್ಯವಹರಿಸಬಹುದಾದ ಎರಡು ರೀತಿಗಳಿಗೆ ಅವಕಾಶವಿರುವುದೇ ಎಂಬುದು ಅಂದಿನ ಪ್ರಶ್ನೆಯಾಯಿತು. ಜಡಪ್ರಧಾನವಾದಿಗಳು, ಚೇತನ ಪ್ರಧಾನವಾದಿಗಳು, ಏಕತತ್ತ್ವವಾದಿಗಳು ದ್ವಿತತ್ತ್ವವಾದಿಗಳು ಜಡ ಅಥವಾ ಚೇತನ ಎಂದು ವ್ಯವಹೃತವಾದ ತತ್ತ್ವದಲ್ಲಿನ ವಿಶೇಷಾಂಶಗಳನ್ನು ಗಮನಿಸಿ ಅವು ಭಿನ್ನವಾಗಿರಬೇಕಾದುದಿಲ್ಲ ಎಂಬ ನಿರ್ಣಯಕ್ಕೆ ಬರಹತ್ತಿದರು.

ಬರ್ಗ್‍ಸನ್ ಭೂತ ವರ್ತಮಾನಗಳನ್ನು ಸೇರಿಸುವ ಅವಿಚ್ಛಿನ್ನವಾದ ಸ್ಮರಣವನ್ನು ಒಳಗೊಂಡಿರುವುದು e್ಞÁನತತ್ತ್ವವೆಂದೂ ಜ್ಞೇಯ ಅವುಗಳ ಕ್ಷಣಿಕ ಸಂತಾನವೆಂದೂ ಒಂದು ವಿಧವಾದ ದ್ವೈತವಾದವನ್ನು ಆರಂಭದಲ್ಲಿ ಮಂಡಿಸಿದ.  ಆತನ ವಿಚಾರ ಮುಂದುವರೆದ ರೀತಿಯನ್ನು ನೋಡಿದರೆ ಆತ ದ್ವೈತವಾದವನ್ನು ತ್ಯಜಿಸಿ e್ಞÁನ ತತ್ತ್ವನಿರ್ವಾಹಕವಾದ ಜೀವಶಕ್ತಿಯೇ ಪ್ರತಿಬದ್ಧವಾಗಿ ಜಡವೆನ್ನಿಸುವುದು ಎಂಬ ಸಿದ್ಧಾಂತಕ್ಕೆ ಬಂದು ಪ್ರಪಂಚ ಏಕತತ್ತ್ವಮೂಲವಾದುದು ಎಂಬ ವಾದದ ಕಡೆ ಸಾಗುತ್ತಿರುವಂತೆ ತೋರುತ್ತದೆ.

ಈ ಒಟ್ಟು ವಿಚಾರದ ಬೆಳವಣಿಗೆಯನ್ನು ಗಮನಿಸಿದರೆ ತೋರುವ ತಾತ್ಪರ್ಯ ಇಷ್ಟು :  ಏಕತತ್ತ್ವವಾಗಲಿ ದ್ವಿತತ್ತ್ವವಾಗಲಿ ಚೇತನಾಚೇತನವಸ್ತುಗಳ ಅಭೇದ ಅಥವಾ ಭೇದಕ್ಕೆ ಮಾತ್ರ ಅನ್ವಯಿಸುವುದಿಲ್ಲ; ಅದು ಜಗನ್ಮೂಲ ತತ್ತ್ವವನ್ನು ಅಧರಿಸಿ ಬಂದ ವಾದ ಎಂಬುದು ಆಧುನಿಕ ಪಾಶ್ಚಾತ್ಯರ ತಿಳಿವಳಿಕೆ.  ಪುರಾತನ ಗ್ರೀಕರು ಉದಕ ಮುಂತಾದವು ಜಗನ್ಮೂಲವೆಂದರು.  ಆನ್ಯಾಕ್ಸ್ಯಗರಸ್‍ನಿಂದ ದ್ವೈತವಾದಕ್ಕೆ ಅವಕಾಶ ಬಂತು.  ಅರಿಸ್ಟಾಟಲ್ ಮತ್ತು ಮಧ್ಯಕಾಲೀನರಿಂದ ಆ ವಿಚಾರ ಸ್ಪಷ್ಟವಾದ ಆಕಾರ ಹೊಂದಿ ಪ್ರಪಂಚಮೂಲ ಸ್ವತಂತ್ರವಾದ ಒಂದೇ ಅಥವಾ ಎರಡೇ ಎಂಬ ಪ್ರಶ್ನೆ ಹುಟ್ಟಿ ಅದು ಒಂದು ಎಂದು ಹೇಗಲ್, ಬ್ರ್ಯಾಡ್ಲೆ ಮುಂತಾದವರು ಏಕತತ್ತ್ವವಾದವನ್ನು ಸಮರ್ಥಿಸಿದರು.

2.  ಪೌರಸ್ತ್ಯ
ದ್ವೈತವಾದದ ಬಗ್ಗೆ ಪೌರಸ್ತ್ಯದ ಅಭಿಪ್ರಾಯಗಳನ್ನು (1) ಕನ್‍ಫೂಷಸನ ಸಿದ್ಧಾಂತ, (2) ಇಸ್ಲಾಂ ಸಿದ್ಧಾಂತ, (3) ಭಾರತೀಯ ಸಿದ್ಧಾಂತ - ಎಂಬ ಮೂರು ಭಾಗಗಳಲ್ಲಿ ಸಂಗ್ರಹಿಸಲಾಗಿದೆ.

1.  ಕನ್‍ಫೂಷಸನ ಸಿದ್ಧಾಂತ : ಚೀನೀ ತತ್ತ್ವe್ಞÁನಿಯಾದ ಈತನ ಪ್ರಕಾರ ಜಗತ್ತಿನ ಮೂಲತತ್ತ್ವ ನಿರಾಕಾರವಾದ ಒಂದು ಶಕ್ತಿವಿಶೇಷ.  ಇದೇ ಸರ್ವಕ್ಕೂ ನಿಯಾಮಕ.  ಇದು ಯಿನ್ ಮತ್ತು ಯಾಂಗ್ ಎಂಬ ಎರಡು ತತ್ತ್ವಗಳನ್ನು ಸೃಜಿಸಿತು.  ಯಿನ್ ಅಭಾವರೂಪವಾದ ತತ್ತ್ವ.  ಯಾಂಗ್ ಭಾವರೂಪವಾದ್ದು.  ಈ ಎರಡೂ ತತ್ತ್ವಗಳು ಪರಸ್ಪರ ವ್ಯಾಪಾರ ಮಾಡಿ ಊಧ್ರ್ವಲೋಕ ಮತ್ತು ಅಧೋಲೋಕಗಳನ್ನು ಮತ್ತು ಅವುಗಳಲ್ಲಿ ಕಂಡುಬರುವ ಸಮಸ್ತ ವಸ್ತುಗಳನ್ನು ನಿರ್ಮಿಸಿದವು.  ಈತ ಈ ಭಾವಗಳನ್ನು ವಿಶದವಾಗಿ ವಿಚಾರ ಮಾಡಿರುವ ಕ್ರಮ ಉಪಲಬ್ಧವಿಲ್ಲ.  ಸಂಘ, ರಾಜ್ಯ ಮತ್ತು ವ್ಯಕ್ತಿ ಇವಕ್ಕೆ ಸಂಬಂಧಿಸಿದ ಉದಾತ್ತ ನಿಯಮಗಳಿಗೆ ಪರತತ್ತ್ವವೇ ಮೂಲವೆಂದೂ ಆ ತತ್ತ್ವಗಳು ಮೊದಲು ಭಾವಾತ್ಮಕವಾಗಿದ್ದು ಪ್ರಪಂಚದಲ್ಲಿ ವಿe್ಞÁನಿಗಳಿಗೆ ಲಬ್ಧವಾಗಿ ಅವರು ಆಯಾ ಕಾಲಕ್ಕೆ ತಕ್ಕಂತೆ ಅವನ್ನು ಬೋಧಿಸುವರೆಂದೂ ಈತ ಹೇಳುತ್ತಾನೆ.  ಒಟ್ಟಿನಲ್ಲಿ ಜಗತ್ತಿನಲ್ಲಿ ಕಂಡು ಬರುವ ಸರ್ವಕ್ಕೂ ಒಂದೇ ಮೂಲವೆಂದು ಈತನ ಭಾವ.

2.  ಇಸ್ಲಾಂ :  ಇಸ್ಲಾಂ ಎಂದರೆ ದೇವರ ಸಂಕಲ್ಪಕ್ಕೆ ಅಧೀನವಾಗಿ ನಡೆದುಕೊಳ್ಳುವುದು. ಸಾಧುವಾದುದನ್ನೇ ಮಾಡಬೇಕು ಎಂಬ ವ್ರತ ಮತ್ತು ಹಾಗೆ ಮಾಡುವ ಪ್ರಯತ್ನ ಇವು ಈ ಭಾವದಲ್ಲಿ ಅಡಗಿವೆ.  ಇಸ್ಲಾಂ ಮತದ ಮುಖ್ಯ ತತ್ತ್ವ ಹೀಗಿದೆ: ಅಲ್ಲ ಎಂಬ ಹೆಸರುಳ್ಳವನೇ ದೇವರು.  ಅವನನ್ನು ಬಿಟ್ಟು ಮತ್ತೊಬ್ಬ ದೇವರಿಲ್ಲ.  ಮಹಮ್ಮದ್ ಹೊರತಾಗಿ ದೇವರನ್ನು ಉಪದೇಶಿಸುವ ಮತ್ತೊಬ್ಬರಿಲ್ಲ.  ದೇವರು ಶುಭಗುಣಪೂರ್ಣ. ಅವನ ಅನಂತಗುಣಗಳನ್ನು ಸರ್ವ ಶಕ್ತಿ, ಸರ್ವಸಮ ಮತ್ತು ಸಾಧು ಎಂಬ ಮೂರು ಭಾಗಗಳಲ್ಲಿ ಹೇಳಬಹುದು. ಸರ್ವವೂ ದೇವರ ಅಧೀನ ಎಂಬ ಭಾವ ಈ ಮತದ ಮುಖ್ಯ ತತ್ತ್ವ.  ಎಲ್ಲವೂ ಒಬ್ಬ ದೇವರ ಅಧೀನ ಎಂಬ ಭಾವದಲ್ಲಿ ಎರಡು ತತ್ತ್ವಗಳ ಪ್ರಸಕ್ತಿ ಇರುವುದಿಲ್ಲ.  

3.  ಭಾರತೀಯ ಸಿದ್ಧಾಂತ:  ಮೊದಲಿನಿಂದೂ ಭಾರತೀಯರಲ್ಲಿ ಪರಿನಿಷ್ಪನ್ನವಾದ ತತ್ತ್ವಶಾಸ್ತ್ರಗಳಿವೆ.  ಅವರ ಮತಾಚಾರಕ್ಕೂ ಸಾಕ್ಷಾತ್ ಪರಂಪರೆಯಾಗಿ ತತ್ತ್ವಶಾಸ್ತ್ರಗಳೇ ಆಧಾರ.

ಜ್ಞಾನವನ್ನು ಹುಟ್ಟಿಸುವ ಸಾಧನ ಇದೆಂದು ನಿರ್ಣಯಿಸುವಾಗ ಭಾರತೀಯರಲ್ಲಿ ಐದು ಪಂಗಡಗಳು ಕಂಡುಬರುವುವು.  1. ವೇದದಿಂದ ತತ್ತ್ವe್ಞÁನ, 2. ಪ್ರತ್ಯಕ್ಷಾನುಮಾನ ಮತ್ತು ಆಗಮ ರೂಪವಾದ ಅನುಭವದಿಂದಲೇ ತತ್ತ್ವe್ಞÁನ, 3. ವೇದದ ಸಹಾಯವುಳ್ಳ ಅನುಭವದಿಂದ ತತ್ತ್ವe್ಞÁನ, 4. ಅನುಭವದ ಸಹಾಯವುಳ್ಳ ವೇದದಿಂದ ತತ್ತ್ವe್ಞÁನ ಮತ್ತು 5. ವೇದ ಒಂದರಿಂದಲೇ ತತ್ತ್ವe್ಞÁನ. 

1. ವೇದದಿಂದ ತತ್ತ್ವe್ಞÁನ:  ವೇದ ಮಾನವನ ಇಹಲೋಕ ಪರಲೋಕ ಶ್ರೇಯಸ್ಸಿಗೆ ಸಾಧನವಾದ ಯಜ್ಞ ಮುಂತಾದ ಕರ್ಮಗಳನ್ನೂ ಅದರಿಂದ ತೃಪ್ತಿ ಹೊಂದುವ ಪ್ರಪಂಚ ನಿಯಾಮಕರಾದ ದೇವತೆಗಳನ್ನೂ ಕರ್ಮಕ್ಕೆ ಕರ್ತೃವಾದ ಆತ್ಮನ ಸ್ವರೂಪವನ್ನೂ ಬೋಧಿಸುವುದು ಎಂಬ ವಾದಕ್ಕೆ ಅವಕಾಶವಿರುವಂತೆ ತೋರಿದರೂ ವೇದದ ಎಲ್ಲ ಭಾಗಗಳೂ ಬ್ರಹ್ಮe್ಞÁನವನ್ನು ಸಾಧಿಸಿಕೊಡುವ ಒಂದೇ ಉದ್ದೇಶವುಳ್ಳವು ಎಂದು ವೇದಾಂತಿಗಳೆಲ್ಲರ ಸಿದ್ಧಾಂತ.

ಒಟ್ಟಿನಲ್ಲಿ, ಯತೋ ವಾ ಇಮಾನಿ ಭೂತಾನಿ ....  ತದ್ಬ್ರಹ್ಮ (ಯಾವುದರ ದೆಶೆಯಿಂದ ಈ ವಸ್ತುಗಳೂ ಇವೆಯೋ ಅದು ಬ್ರಹ್ಮ), ಸದೇವ ಇದ ಮಗ್ರೇ (ಈ ಜಗತ್ತಿನ ಮೊದಲು ಸತ್ ಮಾತ್ರ ಇದ್ದಿತು), ಸನ್ಮೂಲಾಃ .... ಇಮಾಃ ಪ್ರಜಾಃ (ಈ ಸಮಸ್ತ ಪ್ರಾಣಿಗಳೂ ಸತ್ ಎಂಬುದನ್ನು ಮೂಲವಾಗಿ ಉಳ್ಳವು) ಎಂಬೀ ಮುಂತಾದ ರೂಪದಲ್ಲಿ ವೇದ ಜಗತ್ತಿನ ಏಕಮೂಲತ್ವವನ್ನು ಎತ್ತಿಹಿಡಿಯುವುವು.  ಈ ವಾದದಲ್ಲಿ ಸ್ವತಂತ್ರ ತತ್ತ್ವದ್ವಯಮೂಲತ್ವವಾದಕ್ಕೆ ಸ್ಥಾನವಿಲ್ಲ.
ವೇದದ ಏಕಮೂಲತ್ವ ವಾದವನ್ನೇ ಇತಿಹಾಸ ಪುರಾಣಗಳು ಅನುಷ್ಠಾನಕ್ಕೆ ತಂದುವು.  ಇದ ಮಿತ್ಥಂ ಏವ ಪೃಥಗ್ಭಾವಾಃ (ನನ್ನಿಂದಲೇ ಈ ಎಲ್ಲ ವಸ್ತುಗಳೂ) ಎಂಬೀ ಭಗವದ್ಗೀತಾ ಮೊದಲಾದವುಗಳಲ್ಲಿನ ಮಾತುಗಳಲ್ಲಿದು ಸ್ಪಷ್ಟಪಡುವುದು.

2.  ಅನುಭವದಿಂದಲೇ ತತ್ತ್ವe್ಞÁನ:  ವೇದದ ಸಿದ್ಧಾಂತದ ಔಚಿತ್ಯವನ್ನು ವಿಚಾರ ಮಾಡಬೇಕಾದುದು ಪ್ರಕೃತವಾಗಿದ್ದರೂ ಕಾಲಕ್ರಮದಲ್ಲಿ ಪ್ರತ್ಯಕ್ಷ, ಪ್ರತ್ಯಕ್ಷಾನುಮಾನ ಮತ್ತು ಪ್ರತ್ಯಕ್ಷಾನುಮಾನಾಗಮ ರೂಪವಾದ ಅನುಭವದಿಂದಲೇ ಜಗನ್ಮೂಲ ತತ್ತ್ವ ಇದೆಂದು ನಿರ್ಣಯಿಸುವುದು ಸಾಧ್ಯ ಎಂಬ ಭಾವ ತಲೆದೋರಿತು.  ಇದರ ಬೆಳವಣಿಗೆಯಲ್ಲಿ ಕ್ರಮವಾಗಿ ಚಾರ್ವಾಕ, ಬೌದ್ಧ ಮತ್ತು ಜೈನ ಎಂಬ ಮೂರು ಸಿದ್ಧಾಂತಗಳು ಪ್ರವೃತ್ತವಾದುವು. 

ಈ ಸಿದ್ಧಾಂತಗಳಲ್ಲಿ ಸ್ವತಂತ್ರ ತತ್ತ್ವದ್ವಯಮೂಲತ್ವವಾದದ ಸ್ಥಾನವೇನೆಂಬುದನ್ನು ಗಮಿಸುವಾಗ ಹಿಂದೆಯೇ ಸೂಚಿತವಾದಂತೆ ಪಾಶ್ಚಾತ್ಯರು ಮಂಡಿಸಿದ ಸಿದ್ಧಾಂತಗಳ ವಿಷಯದಲ್ಲಿ ಪೌರಸ್ತ್ಯರು ಗಮನಿಸಿದ ಅಂಶಗಳನ್ನು ಮನಸ್ಸಿನಲ್ಲಿಡುವುದು ಒಳ್ಳೆಯದು.
(ಎ)   ಚಾರ್ವಾಕ : ಚಾರ್ವಾಕರಲ್ಲಿ ಅನುಭವ ಎಂದರೆ ಪ್ರತ್ಯಕ್ಷ. ಸ್ವಭಾವದಿಂದಲೇ ಜಗತ್ತು ಬಂದಿತೆನ್ನುವುದು ಇವರ ವಾದ. ಆದರೆ ಸ್ವಭಾವ ಜಡ.  ಪ್ರಪಂಚದಲ್ಲಿ ಜಡವಸ್ತುಗಳಂತೆ ಚೇತನವೂ ಇದೆ.  ಜಡಕ್ಕೆ ಸ್ವಭಾವಕಾರಣವಾದಂತೆ ಚೇತನಕ್ಕೂ ಅದಕ್ಕೆ ಅಸಾಧಾರಣವಾದ ಕಾರಣವಿರಬೇಕು.  ಜಡಚೇತನಗಳು ಪರಸ್ಪರ ವಿರುದ್ಧವಾದುದರಿಂದ ಜಡದಿಂದ ಚೇತನ ಉಂಟಾಗುವುದೆಂಬ ವಾದ ಸರಿಯಲ್ಲ.  ಚೇತನಕ್ಕೆ ಒಂದು ಕಾರಣವಿದ್ದರೆ ಅದು ಸ್ವಭಾವಕ್ಕೆ ಎರಡನೆಯದಾಯಿತು.  ಹೀಗೆ ಚಾರ್ವಾಕವಾದ ಸ್ವತಂತ್ರ ತತ್ತ್ವದ್ವಯಮೂಲತ್ವವಾದಕ್ಕೆ ಅವಕಾಶವನ್ನುಂಟುಮಾಡಿದೆ.

(ಬಿ)   ಬೌದ್ಧ : ಬೌದ್ಧರಲ್ಲಿ ಅನುಭವ ಎಂದರೆ ಪ್ರತ್ಯಕ್ಷ ಮತ್ತು ಅನುಮಾನ; ಶೂನ್ಯವೇ ಪರತತ್ತ್ವ, ಶೂನ್ಯ ಅಭಾವರೂಪದ್ದು.  ಜಗತ್ ಭಾವರೂಪವಾದ್ದು.  ಇದು ತನಗೆ ಕಾರಣವಾಗಿ ಶೂನ್ಯವಲ್ಲದ ಭಾವರೂಪವಾದ ಒಂದು ಕಾರಣವನ್ನು ಅಪೇಕ್ಷಿಸುವುದು.  ಈ ಕಾರಣದಿಂದ ಶೂನ್ಯ ಮತ್ತು ಭಾವವಸ್ತು ಎಂಬ ಸ್ವತಂತ್ರವಾದ ಎರಡು ತತ್ತ್ವಗಳು ಜಗತ್ತಿನ ಮೂಲವೆಂದು ಹೇಳಿದಂತಾಯಿತು.

ಬೌದ್ಧರ ವಿe್ಞÁನವಾದ ಎಲ್ಲವನ್ನೂ ವಿe್ಞÁನರೂಪವೆಂದು ಸಿದ್ಧಾಂತಿಸುತ್ತದೆ.  ಆಂತರವಾದ ವಿe್ಞÁನವೇ ಬಾಹ್ಯವಾದ ವಸ್ತುವಿನಂತೆ ತೋರುವುದು ಎಂದು ಈ ವಾದದ ಭಾವ.  ಆದರೆ ಬಾಹ್ಯ ಎಂಬ ಭಾವಕ್ಕೆ ವಿe್ಞÁನ ಹೇಗೆ ಕಾರಣ ಎಂಬುದನ್ನು ವಾದಿಸುವುದು ಸಾಧ್ಯವಿಲ್ಲ.  ಎಲ್ಲವೂ ವಿe್ಞÁನವಾದರೆ ಇದು ವಿe್ಞÁನದಿಂದ ಬಾಹ್ಯ ಎಂದು ತೋರಲು ಅವಕಾಶವೇ ಇಲ್ಲ.  ಬಾಹ್ಯ ಎಂಬ ಭಾವಕ್ಕೆ ವಿe್ಞÁನವಲ್ಲದ ಮತ್ತೊಂದು ತತ್ತ್ವ ಮೂಲ.  ಹೀಗೆ ಪ್ರಪಂಚ ಸ್ವತಂತ್ರ ತತ್ತ್ವದ್ವಯ ಮೂಲವಾದ್ದು ಎಂಬ ವಾದ ವಿe್ಞÁನವಾದದಲ್ಲಿ ಅಡಗಿದೆ. 

(ಸಿ)  ಜೈನ:  ಜೈನರ ಪ್ರಕಾರ ಅನುಭವ ಎಂದರೆ ಪ್ರತ್ಯಕ್ಷ.  ಅನುಮಾನ ಮತ್ತು ಆಪ್ತ ವಾಕ್ಯ.  ಪ್ರಂಪಂಚ ನಿತ್ಯವಾಗಿ ಜೀವ ಮತ್ತು ಅಜೀವ ಎಂಬ ಎರಡು ಭಾಗಗಳುಳ್ಳದು ಎಂದು ಜೈನವಾದ ಹೇಳುತ್ತದೆ. ಇವು ಇರುವಿಕೆಯಲ್ಲಿ ಪರಸ್ಪರಾಧೀನವಲ್ಲ.  ಆದರೂ ಇವರೆರಡೂ ಸೇರಿ ಕಾರ್ಯರೂಪವಾದ ಪ್ರಪಂಚವನ್ನುಂಟುಮಾಡುತ್ತವೆ. ಅಜೀವ ವಸ್ತುಗಳಲ್ಲಿ ಪುದ್ಗಲ ಎಂಬುದು  ಯಾವ ಆಕಾರ ಅಥವಾ ಗುಣಗಳನ್ನಾದರೂ ತೆಗೆದುಕೊಳ್ಳುವ ಸಾಮಥ್ರ್ಯವುಳ್ಳದು.  ಜೀವದ ಕರ್ಮಾನುಸಾರ ಅದು ಆಕಾರ ಮತ್ತು ಗುಣಗಳನ್ನು ಹೊಂದುವುದು.  ಇದೇ ಜೀವದ ಅನುಭವಕ್ಕೆ ಬರುವ ವಿಷಯ. 

ಹೀಗೆ ಜೈನವಾದದಲ್ಲಿ ಪ್ರಪಂಚಕ್ಕೆ ಮೂಲವಾದುದು ಜೀವ ಮತ್ತು ಅಜೀವ ಎಂಬ ಸ್ವತಂತ್ರವಾದ ಎರಡು ತತ್ತ್ವಗಳು ಕಾಣಬರುತ್ತವೆ.

3.  ವೇದದ ಸಹಾಯವುಳ್ಳ ಅನುಭವದಿಂದ ತತ್ತ್ವe್ಞÁನ: 
(ಎ)  ನ್ಯಾಯವೈಶೇಷಿಕ ಎಂಬುದು ಆರಂಭದಲ್ಲಿ ಸ್ವತಂತ್ರವಾಗಿ ಪ್ರವೃತ್ತವಾದ ನ್ಯಾಯ ಮತ್ತು ವೈಶೇಷಿಕ ಎಂಬ ಎರಡು ಸಿದ್ಧಾಂತಗಳನ್ನು ಒಟ್ಟುಗೂಡಿಸಿದ ವಾದ.  ಕಾಲವನ್ನು ಆಧಾರ ಮಾಡಿಕೊಂಡು ಈಶ್ವರ ಪರಮಾಣುಗಳಿಂದ ಜೀವಾತ್ಮರ ಕರ್ಮಾನುಸಾರ ಕಾರ್ಯರೂಪವಾದ ಜಗತ್ತನ್ನು ಸೃಷ್ಟಿಸುವನು ಎಂದು ಈ ವಾದ ಹೇಳುತ್ತದೆ.  ಈಶ್ವರ ಎಂಬುದು ಪರಮಾತ್ಮ.  ಆತ್ಮ ಎಂದರೆ e್ಞÁನವುಳ್ಳ ವಸ್ತು, ಕಾಲ, ಪರಮಾಣುಗಳು ಮತ್ತು ಜೀವರು ಮತ್ತು ಪರಮಾತ್ಮ - ಇವೆಲ್ಲವೂ ನಿತ್ಯವಸ್ತುಗಳು, ನಿತ್ಯ ಎಂದರೆ ಜನ್ಮರಹಿತ ಮತ್ತು ನಾಶರಹಿತ.

ಒಟ್ಟಿನಲ್ಲಿ ಈ ವಾದದಂತೆ ಈಶ್ವರ ಮತ್ತು ಈಶ್ವರನಲ್ಲಿನ ವಸ್ತುಗಳು ಇವರೆರಡೂ ಜಗತ್ತಿನ ಮೂಲ ಎಂದಂತಾಯಿತು.
(ಬಿ)  ಸಾಂಖ್ಯ :  ಪರಸ್ಪರ ಸ್ವತಂತ್ರವಾದ ಪ್ರಕೃತಿ ಮತ್ತು ಪುರುಷ ಎಂಬ ಎರಡು ತತ್ತ್ವಗಳಿಂದ ಜಗತ್ ಹುಟ್ಟಿದೆ ಎಂದು ಸಾಂಖ್ಯ ಹೇಳುತ್ತದೆ.  ಪ್ರಕೃತಿ ಜಡ. ಅದು e್ಞÁನರೂಪವಲ್ಲ.  ಅದು e್ಞÁನಕ್ಕೆ ವಿಷಯ ಮಾತ್ರ. ಅದು ಸತ್ತ್ವ ರಜಸ್ತಮೋಗುಣಗಳ ಸಂಘಾತ. ಸತ್ತ್ವ ಸುಖ. ರಜಸ್ ದುಃಖ. ತಮಸ್ ಮೋಹ.  ಕರ್ತೃತ್ವ ಪ್ರಕೃತಿಯ ಸ್ವಭಾವ.  ಅದು ತನ್ನ ರೂಪದಲ್ಲಿರುವಾಗ ತನ್ನಲ್ಲಿ ತಾನು ಪರಿಣಾಮ ಹೊಂದುತ್ತದೆ.

ಪುರುಷವಾದರೋ ಶುದ್ಧ ಚೈತನ್ಯಾತ್ಮಕ. ಅದು ಯಾವುದಕ್ಕೂ ಕರ್ತೃವಲ್ಲ; ಯಾವುದಕ್ಕೂ ವಿಷಯವಲ್ಲ.  ಅದಕ್ಕೆ ಆಶ್ರವಾದುದು ಮತ್ತೊಂದಿಲ್ಲ.  ಪುರುಷರು ಅನೇಕ.  ನಾನು ಅವನಲ್ಲ ಎಂಬ ಅನುಭವವೇ ಈ ವಿಷಯದಲ್ಲಿ ಪ್ರಮಾಣ.  ಶುದ್ಧವಾದ ಪರುಷತತ್ತ್ವಕ್ಕೆ ಸ್ವಭಾವದಿಂದಲೇ ಬಂಧವಿಲ್ಲ.  ಮೋಕ್ಷವಿಲ್ಲ

ಆದರೆ ಪುರುಷ ಸನ್ನಿಧಾನದಲ್ಲಿ ಪ್ರಕೃತಿಯ ಪರಿಣಾಮದಲ್ಲಿ ಗುಣ ವೈಷಮ್ಯ ಹುಟ್ಟುವುದು.  ಸತ್ತ್ವ ಮೊದಲಾದ ಗುಣಗಳೂ ಒಂದಕ್ಕೊಂದು ಬೆರೆಯುವುವು.  ಈ ಬೆರೆಯುವಿಕೆ ವಿಭಿನ್ನರೀತಿ ವಿಭಿನ್ನ ವಸ್ತುವನ್ನು ಹುಟ್ಟಿಸುವುದು.  ಈ ವಸ್ತುಗಳ ಪ್ರಭಾವದಿಂದ ನಾನು, ನನ್ನದು ಎಂಬ ಭಾವಗಳು ಹುಟ್ಟುವುದು.  ಇವು ಪುರುಷವಸ್ತುವಿನದು ಎಂದು ಪ್ರಕೃತಿ ಪುರುಷರ ಅವಿವೇಕ ಹುಟ್ಟುವುದು. ಈ ಅವಿವೇಕವೇ ಅನಾದಿ ಸಂಸಾರ ಕಾರಣ.

ಸತ್ತ್ವ ಗುಣಪ್ರಾಚುರ್ಯದಿಂದ ಪ್ರಕೃತಿ ಪುರುಷರ ವಿವೇಕ ಹುಟ್ಟುವುದು. ವಿವೇಕ ಹುಟ್ಟಿದ ಮೇಲೆ ವಿವೇಕವುಳ್ಳದೆಂದು ಭಾವಿತವಾದ ಪುರುಷನಿಗೋಸ್ಕರ ಪ್ರಕೃತಿ ಗುಣವೈಷಮ್ಯರೂಪವಾದ ಪರಿಣಾಮವನ್ನು ಹೊಂದುವುದಿಲ್ಲ.  

ಹೀಗೆ ಸಾಂಖ್ಯದ ಜಗತ್ ಪ್ರಕೃತಿ ಪ್ರಧಾನವಾದರೂ ಸನ್ನಿಧಾನಕ್ಕೋಸ್ಕರವಾದರೂ ಪುರುಷತತ್ತ್ವವನ್ನು ಜಗತ್ ಸೃಷ್ಟಿ ಅಪೇಕ್ಷಿಸುವುದರಿಂದ ಈ ವಾದದಲ್ಲಿ ಸ್ವತಂತ್ರ ದ್ವಿತತ್ತ್ವ ಮೂಲತ್ವ ವಾದಕ್ಕೆ ಸ್ಪಷ್ಟವಾದ ಅವಕಾಶವಿದೆ.

(ಸಿ) ಯೋಗ:  ಯೋಗ ಪ್ರಪಂಚದ ಮೂಲಕಾರಣವನ್ನು ಹೇಳುವ ವಿಷಯದಲ್ಲಿ ಸ್ಥೂಲವಾಗಿ ಸಾಂಖ್ಯಸಿದ್ಧಾಂತವನ್ನೇ ಅನುಕರಿಸುವುದು.  ಆದರೂ ಈಶ್ವರ ಎಂಬ ತತ್ತ್ವವನ್ನು ಅಂಗೀಕರಿಸಿ ಅವನ ಇಚ್ಛೆಯೂ ಪ್ರಕೃತಿಪರಿಣಾಮಕ್ಕೆ ಕಾರಣ ಎಂದು ಧ್ಯಾನದಿಂದ ಪ್ರೀತನಾದ ಅವನ ಅನುಗ್ರಹವೂ ಪ್ರಕೃತಿ ಪುರುಷ ವಿವೇಕಕ್ಕೆ ಸಾಧನ ಎಂದು ಹೇಳುವುದೇ ಯೋಗಸಿದ್ಧಾಂತ. ಪ್ರಕೃತಿ ಪುರುಷ ವಿವೇಕಕ್ಕೆ ಸಾಧನವಾಗಿ ಚಿತ್ತವೃತ್ತಿ ನಿರೋಧವೆಂಬ ಯೋಗವನ್ನು (ಉಪಾಯ) ಹೇಳಿ ಅದಕ್ಕೆ ಅಂಗವಾಗಿ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಎಂಬ ಎಂಟು ಸಾಧನಗಳು ನಿರೂಪಿತವಾಗಿರುವುವು. ಧ್ಯಾನದ ವಿಷಯ ಪ್ರಕೃತಿ ಪುರುಷರ ವಿವಿಕ್ತ ಸ್ವಭಾವವಾಗಬಹುದು.  ಅಥವಾ ಈಶ್ವರನಾಗಬಹುದು.  ಯೋಗಿಗೆ ಆದರ್ಶವಾಗಿ ಯೋಗ ಸಿದ್ಧಿಯ ಪೂರ್ಣತೆಯುಳ್ಳ ಪರುಷನಿರಬೇಕೆಂಬ ಭಾವವೇ ಸಾಂಖ್ಯದ ಪ್ರಕೃತಿ ಪುರುಷರ ಜೊತೆಯಲ್ಲಿ ಈಶ್ವರನನ್ನು ಅಂಗೀಕರಿಸುವುದಕ್ಕೆ ನಿಮಿತ್ತ. 

ಒಟ್ಟಿನಲ್ಲಿ ಯೋಗಶಾಸ್ತ್ರದಲಿ ಸಾಂಖ್ಯದ ಸ್ವತಂತ್ರ ತತ್ತ್ವದ್ವಯಮೂಲತ್ವ ಪಾದದ ಜೊತೆಯಲ್ಲಿ ಪ್ರಪಂಚಕ್ಕೆ ಮೂಲ ಈಶ್ವರ ಮತ್ತು ಈಶ್ವರನಲ್ಲದ ಪ್ರಕೃತಿಪುರುಷರು ಎಂದು ತಿಳಿಯಲು ಅವಕಾಶವುಂಟಾಗಿ ಮತ್ತೊಂದು ರೀತಿಯಲ್ಲಿ ಅದೇ ದ್ವಿತತ್ತ್ವವಾದದ ಪ್ರಸಕ್ತಿ ಇರುವುದು.  

1.  ಪೂರ್ವಮೀಮಾಂಸಾ : ಜಗತ್ತು ಒಟ್ಟಿನಲ್ಲಿ ಆತ್ಮ ಮತ್ತು ಅನಾತ್ಮ ರೂಪವಾದುದು.  e್ಞÁನಶಕ್ತಿಯೇ ಆತ್ಮನ ಸ್ವರೂಪ.  ಆತ್ಮರು ಅನೇಕ. ಆತ್ಮವಲ್ಲದುದು ಅನಾತ್ಮ.  ಆತ್ಮ ನಿತ್ಯ.  ಅನಾತ್ಮದಲ್ಲಿ ಬಹುಭಾಗ ನಿತ್ಯ.  ಆತ್ಮ ಕರ್ತೃ. ಆತ್ಮನ ಕರ್ಮಾನುಸಾರವಾಗಿ ಅನಾತ್ಮವಸ್ತುಗಳು ಪರಸ್ಪರ ಮಿಳಿತವಾಗಿ ಕಾರ್ಯರೂಪವಾದ ಜಗತ್ತು  ಆಗುವುದು.
ಪೂರ್ವಮೀಮಾಂಸಕ್ಕೆ ಸೇರಿದ ಪ್ರಾಭಾಕರ ಸಿದ್ಧಾಂತದಲ್ಲಿ ಕೆಲವು ಪ್ರಮೇಯಗಳ ವಿವರಣದಲ್ಲಿ ವೈಲಕ್ಷಣ್ಯವಿದ್ದರೂ ಜಗತ್‍ಕಾರಣಗಳ ವಿಷಯದಲ್ಲಿ ಒಟ್ಟಿನಲ್ಲಿ ಮೇಲೆ ಸಂಗ್ರಹೀತವಾದ ಸಿದ್ಧಾಂತವೇ ಅಂಗೀಕೃತವಾಗಿರುವುದು. 
ಇವುಗಳಲ್ಲಿ ಆತ್ಮ ಅನಾತ್ಮ ಎಂಬ ಎರಡು ತತ್ತ್ವಗಳು ಜಗತ್ಕಾರಣ ಎಂಬುದು ಸ್ಪಷ್ಟ.

4.  ಅನುಭವದ ಸಹಾಯದಿಂದ ವೇದದಿಂದ ತತ್ತ್ವe್ಞÁನ.
ವೇದದ ಸಹಾಯವುಳ್ಳ ಅನುಭವ ಎಂಬಲ್ಲಿ ವೇದದಿಂದ ಅನುಭವ ವಿಸ್ತøವಾಗುವುದು ಎಂದು ತಾತ್ಪರ್ಯ. ಅನುಭವ ಸಹಾಯವುಳ್ಳ ವೇದ ಎಂದರೆ ವೇದಾರ್ಥ ನಿಯಮವಾಗಿ ಅನುಭವಕ್ಕೆ ಬರುವಿಕೆ. ಈ ದೃಷ್ಟಿಯಿಂದ ಅದ್ವೈತವೇದಾಂತ ಮತ್ತು ವಿಶಿಷ್ಟಾದ್ವೈತ ವೇದಾಂತ - ಇವು ಪ್ರವೃತ್ತವಾಗಿರುವುವು ಎಂದು ಹೇಳಬಹುದು.  ಅನುಭವದಿಂದ ವೇದಾಂತಾರ್ಥ ಅಸಂದಿಗ್ಧವಾಗುವುದು.

(i) ಅದ್ವೈತ ವೇದಾಂತ : ಬ್ರಹ್ಮನೇ ಜಗತ್ತಿನ ಮೂಲ ಎಂದು ಸಿದ್ಧಾಂತಿಸಿ ಪ್ರಪಂಚ ಮಾಯಾರೂಪವಾದ್ದು ಎಂದು ಇದು ಸಾರುತ್ತದೆ. 				(ನೋಡಿ- ಅದ್ವೈತ)

ಈ ವಾದದಂತೆ ಮಿಥ್ಯಾ ಅಥವಾ ಅನಿರ್ವಚನೀಯ ಎಂದರೂ ಅe್ಞÁನವು ಬ್ರಹ್ಮನ ಜೊತೆಯಲ್ಲಿ ಜಗತ್ತಿನ ಕಾರಣವಾಗಿರುವುದು. ಈ ನಿಮಿತ್ತದಿಂದ ಸ್ವತಂತ್ರ ತತ್ತ್ವದ್ವಯ ಮೂಲತ್ವವಾದ ಅದ್ವೈತದಲ್ಲಿ ಅಡಗಿರುವುದು ಎಂದು ಸಿದ್ಧಿಸುವುದು.  ಹಿಂದೆ ಪ್ಲೇಟೊ ವಾದ ಇದೇ ರೀತಿಯ ಭಾವಕ್ಕೆ ಅವಕಾಶ ಕೊಟ್ಟಿರುವುದನ್ನು e್ಞÁಪಿಸಿಕೊಳ್ಳಬಹುದು.  

(ii)   ವಿಶಿಷ್ಟಾದ್ವೈತ ವೇದಾಂತ.  ಸಿದ್ಧಾಂತದಂತೆ ಸೂಕ್ಷ್ಮ - ಚಿದಚಿದ್ವಿಶಿಷ್ಟನಾದ ಬ್ರಹ್ಮ ಜಗತ್ಕಾರಣನೇ ಹೊರತು ಕೇವಲ ಬ್ರಹ್ಮನಲ್ಲ. ಬ್ರಹ್ಮಶರೀರಿ.  ಚಿದಚಿತ್ತುಗಳು ಶರೀರ. ಬ್ರಹ್ಮ ಶೇಷಿ. ಚಿದಚಿತ್ತುಗಳು ಶೇಷ. ಬ್ರಹ್ಮನು ಪ್ರಕಾರಿ. ಚಿದಚಿತ್ತುಗಳು ಪ್ರಕಾರ.  ಹೀಗೆ ಬ್ರಹ್ಮ ಮತ್ತು ಚಿದಚಿತ್ತುಗಳು ಪರಸ್ಪರ ಭಿನ್ನ. ಚಿದಚಿದ್ವಸ್ತುಗಳನ್ನು ಬ್ರಹ್ಮ ಮಾಡಲಿಲ್ಲ. ಇರುವ ವಸ್ತುಗಳಲ್ಲಿ ಬ್ರಹ್ಮ ಅಂತರ್ಯಾಮಿ ಮಾತ್ರ.  ಇರುವಿಕೆಯಲ್ಲಿ ಬ್ರಹ್ಮನಂತೆ ಚಿದಚಿತ್ತುಗಳು. ಹೀಗೆ ಜಗತ್ ಸ್ವತಂತ್ರವೇ ಹೊರತು ಬ್ರಹ್ಮತಂತ್ರವಲ್ಲ.  ಈ ನಿಮಿತ್ತದಿಂದ ಜಗತ್ ಸ್ವತಂತ್ರ ತತ್ತ್ವದ್ವಯ ಮೂಲವೇ ಆಯಿತು.  

5.  ವೇದ ಒಂದರಿಂದಲೇ ತತ್ತ್ವe್ಞÁನ.
ಪ್ರಪಂಚದ ಮೂಲ ಎಂಬ ಭಾವದಲ್ಲಿಯೇ ಆ ಮೂಲ ಎಂಬುದು ಸ್ವತಂತ್ರವಾದ ಒಂದೇ ತತ್ತ್ವ, ಅದು ಯಾವ ರೀತಿಯ ಪಾರತಂತ್ರ್ಯವನ್ನೂ ಸಹಿಸುವುದಿಲ್ಲ ಎಂಬ ಅರ್ಥವಿರುವುದು.  ಈ ಸ್ವತಂತ್ರ ತತ್ತ್ವವನ್ನು ತಿಳಿಸಲು ಅಪೌರುಷೇಯವಾದ ವೇದದ ಪ್ರವೃತ್ತಿ.  ಈ ಭಾವದಲ್ಲಿಯೇ ಇತರ ಪ್ರಮಾಣಗಳು ತನ್ನ ತನ್ನ ಅವಧಿಸಹಿತವಾಗಿಯೇ e್ಞÁತವಾಗುವುವು ಎಂಬ ಅರ್ಥವಿರುವುದು. ವೇದಾರ್ಥವಾಗದ ಕಾಲದಲ್ಲಿ ಉಂಟಾದ ಪ್ರಪಂಚದ e್ಞÁನ ವೇದಾರ್ಥಕ್ಕೆ ಅನುಕೂಲಿಸುವುದಿಲ್ಲ.
ವೇದದ ಸರ್ವವಾಕ್ಯಗಳೂ ಪರಸ್ಪರ ಸಂಗತ.  ಮಹಾವಾಕ್ಯಗಳು ಇತರ ವಾಕ್ಯಗಳಿಂದ ಸಿದ್ಧವಾದ ಅರ್ಥವನ್ನು ಉಪಸಂಹಾರ ಮಾಡುವುವು.  ವೇದದ ಸರ್ವ ವಾಕ್ಯಗಳೂ ಸಮಾನವಾಗಿ ಪ್ರಮಾಣ. ಒಂದು ವಾಕ್ಯದಲ್ಲಿ ಇಡೀ ವೇದದ ಅರ್ಥ ಅಡಗಿರುವುದು.  ಇದೇ ರೀತಿಯಲ್ಲಿ ವೇದದ ಸರ್ವಶಬ್ಧಗಳೂ ಒಂದೇ ಅರ್ಥಕ್ಕೆ e್ಞÁಪಕ. ಹೀಗೆ ವೇದದಿಂದಲೇ ವೇದಾರ್ಥ ಸಿದ್ಧಿಸುವುದು.  ಅದಕ್ಕೆ ಅನುಭವದ ಸಹಾಯ ಬೇಕಿಲ್ಲ.  ವೇದಾರ್ಥe್ಞÁನದ ಸನ್ನಿಧಾನದಲ್ಲಿ ಅನುಭವ ಅದರ ಕಾರ್ಯವೇ ಹೊರತು ಅದಕ್ಕೆ ಸಹಾಯಮಾಡುವುದಿಲ್ಲ.  ಇಂಥ ಅರ್ಥವನ್ನು ಕೊಡುವ ಅವಸ್ಥೆಯಲ್ಲಿ ವೇದ ಪ್ರಮಾಣ ; ಅದರ ಅರ್ಥ ಸತ್ಯ. 
	                                                        (ಎಚ್.ಎನ್.ಆರ್.ಎ.) 
ದ್ವೈತ ತತ್ತ್ವ:  (ಮಧ್ವಾಚಾರ್ಯ ಪ್ರಣೀತ) ; ಭಾರತೀಯ ತತ್ತ್ವಶಾಸ್ತ್ರದಲ್ಲಿ ಪ್ರತಿಪಾದಿತವಾಗಿರುವ ಮೂರು ವೈದಿಕ ದರ್ಶನಗಳಲ್ಲೊಂದು. ಅದ್ವೈತ ಹಾಗೂ ವಿಶಿಷ್ಟಾದ್ವೈತಗಳು ಉಳಿದೆರಡು.
ಮಧ್ವಾಚಾರ್ಯರಿಂದ ಪ್ರಣೀತವಾದ ದ್ವೈತ ತತ್ತ್ವದ ತಿರುಳನ್ನು ಶ್ರೀಪಾದ ರಾಜರದೆಂದು ಹೇಳಲಾಗುವ ಈ ಶ್ಲೋಕ ಬಹಳ ಚೆನ್ನಾಗಿ ಪ್ರತಿಪಾದಿಸುತ್ತದೆ:
ಶ್ರೀಮನ್ಮಧ್ವಮತೇ ಹರಿಃ ಪರತರಃ ಸತ್ಯಂ ಜಗತ್ತತ್ವತೋ
ಭೇದೋ ಜೀವಗಣಾ ಹರೇರನುಚರಾಃ ನೀಚೋಚ್ಚಭಾವಂ ಗತಾಃ
ಮುಕ್ತಿರ್ನೈಜಸುಖಾನುಭೂತಿರಮಲಾ ಭಕ್ತಿಶ್ಚ ತತ್ಸಾಧನಂ
ಹ್ಯಕ್ಷಾದಿ ತ್ರಿತಯಂ ಪರಮಾಣಂ ಅಖಿಲಾಮ್ನಾಯೈಕ ವೇದ್ಯೋ ಹರಿಃ
ಈ ಶ್ಲೋಕದ ಅರ್ಥ ಹೀಗಿದೆ.  1.  ಶ್ರೀಹರಿಯೇ ಸರ್ವೋತ್ತಮ. 2.  ಜಗತ್ತು ಪಾರಮಾರ್ಥಿಕ ಸತ್ಯ. 3. ಪಂಚಭೇದ ಪಾರಮಾರ್ಥಿಕ. 4.  ಜೀವರು ಶ್ರೀಹರಿಯ ನಿತ್ಯದಾಸರು. 5.  ಜೀವರು ಪರಸ್ಪರ ಭಿನ್ನರು ಮತ್ತು ಉಚ್ಚನೀಚರೆಂಬ ತಾರತಮ್ಯ ಉಳ್ಳವರು. 6. ಸ್ವರೂಪಾನಂದಾವಿರ್ಭಾವೇ ಮುಕ್ತಿ. 7. ಶ್ರೀಹರಿಯ ಸರ್ವೋತ್ತಮತ್ವ ಮೊದಲಾದ ಮಾಹಾತ್ಮ e್ಞÁನಪೂರ್ವಕವಾದ ಉತ್ತಮ ಭಕ್ತಿಯೇ ಮುಕ್ತಿಗೆ ಸಾಧನ.  8. ಪ್ರತ್ಯಕ್ಷ ಅನುಮಾನ ಆಗಮಗಳೆಂದು ಪ್ರಮಾಣಗಳು ಮೂರು ವಿಧ. 9.  ಸಕಲ ವೇದಗಳೂ ಪರಮ ಮುಖ್ಯ ವೃತ್ತಿಯಿಂದ ಶ್ರೀಹರಿಯನ್ನು ಪ್ರತಿಪಾದಿಸುತ್ತವೆ.  
ಮಧ್ವಾಚಾರ್ಯರ ಪ್ರಕಾರ ಪದಾರ್ಥಗಳು ದಶವಿಧವಾಗಿವೆ.  ದ್ರವ್ಯ, ಗುಣ, ಕರ್ಮ, ಸಾಮಾನ್ಯ, ವಿಶೇಷ, ವಿಶಿಷ್ಟ, ಅಂಶ, ಶಕ್ತಿ, ಸಾದೃಶ, ಅಭಾವ- ಹೀಗೆ.  ಇವಲ್ಲದೆ ಪರಮಾತ್ಮ, ಲಕ್ಷ್ಮೀ, ಜೀವಾತ್ಮ, ಅವ್ಯಾಕೃತಾಕಾಶ, ಪ್ರಕೃತಿ, ಗುಣತ್ರಯ, ಮಹತ್ತತ್ತ್ವ, ಅಹಂಕಾರತತ್ತ್ವ, ಬುದ್ಧಿ, ಮನಸ್ಸು, ಇಂದ್ರಿಯ, ಮಾತ್ರಾ, ಭೂತ, ಬ್ರಹ್ಮಾಂಡ, ಅವಿದ್ಯೆ, ವರ್ಣ, ಅಂಧಕಾರ, ಕಾಲ, ವಾಸನಾ, ಪ್ರತಿಬಿಂಬ ಎಂದು ಇಪ್ಪತ್ತು ದ್ರವ್ಯಗಳಿವೆ.  ಇವನ್ನು ತಿಳಿಯಲು ದ್ವೈತ ಸಿದ್ಧಾಂತದ ಅಡಿಗಲ್ಲು ಎಂದು ಹೇಳಿರುವ ಭೇದತತ್ತ್ವದ ಮನನ ಅಗತ್ಯ.

ಭೇದ :  ಪ್ರತಿಯೊಂದು ವಸ್ತುವೂ ಬೇರೆಲ್ಲ ವಸ್ತುಗಳಿಂದ ಭಿನ್ನವಾಗಿದೆ.  ಭೇದವೆಂದರೆ ಎರಡು ಅಥವಾ ಅನೇಕ ವಸ್ತುಗಳ ನಡುವಿನ ವ್ಯತ್ಯಾಸ ಮತ್ತು ವೈಶಿಷ್ಟ್ಯ. ಭೇದ ಎಂದರೆ ಅನ್ಯೋನ್ಯಭಾವ ಎಂದೂ ಅರ್ಥವಾಗುತ್ತದೆ.  ಉದಾ: ಂ ಯು ಃ ಅಲ್ಲ ; ಃ ಯು ಂ ಅಲ್ಲ; ಇವುಗಳ ನಡುವಿನ ಅನ್ಯೋನ್ಯಾಭಾವವೇ, ಅಂದರೆ ಂ ಯಲ್ಲಿ ಃ ಇಲ್ಲ ಮತ್ತು ಃ ಯಲ್ಲಿ ಂ ಇಲ್ಲ ಎಂಬ ಭಾವವೇ ಭೇದ. 

ಭೇದ ಪಂಚವಿಧವಾಗಿದೆ:  1. ದೇವರು ಮತ್ತು ಜೀವರ ನಡುವಿನ ಭೇದ.  2.  ದೇವರು ಮತ್ತು ಪ್ರಕೃತಿಯ ನಡುವಿನ ಭೇದ. 3. ಜೀವ ಮತ್ತು ಪ್ರಕೃತಿಯ ನಡುವಿನ ಭೇದ. 4. ಜೀವ ಮತ್ತು ಜೀವರ ನಡುವಿನ ಭೇದ ಮತ್ತು 5. ಪ್ರಕೃತಿ (ಜಡ) ಯಲ್ಲಿರುವ ಬೇರೆ ಬೇರೆ ಪದಾರ್ಥಗಳ ಭೇದ.

ಮಧ್ವಾಚಾರ್ಯರ ಪ್ರಕಾರ ಸ್ವತಂತ್ರ ತತ್ತ್ವ (ಬ್ರಹ್ಮ ಅಥವಾ ದೇವರು) ಮತ್ತು ಅಸ್ವತಂತ್ರ ತತ್ತ್ವ (ಜೀವ, ಜಡ) ಎಂದು ಎರಡು ತತ್ತ್ವಗಳಿವೆ.  ದೇವರೊಬ್ಬನೇ ಸ್ವತಂತ್ರ.  ಆತ ನಿರ್ಗುಣನಲ್ಲ; ಸಕಲಕಲ್ಯಾಣಗುಣಪರಿಪೂರ್ಣ. ಜೀವ ಜಡ ಇತ್ಯಾದಿಗಳ ಅಸ್ತಿತ್ವ. ಪರಿಪಾಲನೆಗಳು ದೇವರ ದಯೆಯ ಮೇಲೆ ಅವಲಂಬಿತವಾಗಿವೆ.  ಆತ ಬೇಕಾದರೆ ಜೀವ ಮತ್ತು ಜಡಗಳನ್ನು ನಾಶಪಡಿಸಬಹುದು.  ಆದರೆ ಆತ ಅವುಗಳ ಮೇಲಿನ ಕರುಣೆಯಿಂದ ಹಾಗೆ ಮಾಡುವುದಿಲ್ಲ. 
ದೇವರೆಂದರೆ ಇಲ್ಲಿ ವ್ಯಕ್ತಿ: ಪುರುಷೋತ್ತಮ. ಆತ ವ್ಯಕ್ತಿಯಾದರೂ ಆತನ ದಿವ್ಯವೈಭವ ಹಾಗೂ ಶಕ್ತಿಸಾಮಥ್ರ್ಯಗಳಿಗೆ ಯಾವ ಮಿತಿಯೂ ಇಲ್ಲ.  ಆತನೇ ಸರ್ವೋತ್ಕøಷ್ಟ.  ಸರ್ವೋತ್ತಮ, ಸರ್ವಜ್ಞ. ಪ್ರಪಂಚದ ಸೃಷ್ಟಿ ಸ್ಥಿತಿ ಲಯಗಳಿಗೆ ಆತನೇ ಕಾರಣ.  ಆತನೇ ಜಗತ್ತಿನ ನಿಯಾಮಕ, ಆತನನ್ನು ಬಿಟ್ಟು ಉಳಿದಿದ್ದೆಲ್ಲವೂ ಅಸ್ವತಂತ್ರ.  ಆತ ನಿತ್ಯತೃಪ್ತನಾದರೂ ಜೀವಿಗಳು ಸಂಸಾರಚಕ್ರದಿಂದ ಹೊರಬರಲೆಂಬ ಮಹದುದೇಶದಿಂದ ಈ ಜಗತ್ತನ್ನು ಸೃಷ್ಟಿಸಿ, ಜೀವರಿಗೆ ತನ್ನನ್ನು ಸೇರಲು ಅವಕಾಶ ಮಾಡಿಕೊಡುತ್ತಾನೆ.  ಆತ ಒಬ್ಬನೇ ಆದರೂ ಅನೇಕ ರೂಪಗಳಲ್ಲಿ, ಅವತಾರಿಯಾಗಿ ಕಾಣಿಸಿಕೊಳ್ಳುತ್ತಾನೆ. 
ದೇವರು ಜಗತ್ತಿನ ಉಪಾದಾನಕಾರಣನಲ್ಲ; ನಿಮಿತ್ತನಷ್ಟೇ ಆಗಿದ್ದಾನೆ.  ಈ ಜಗತ್ತಿಗೆ ಉಪಾದಾನಕಾರಣ, ಪ್ರಕೃತಿ, ಆಕೆಯ ಮೂಲಕ ದೇವರು ಜಗತ್ ಸೃಷ್ಟಿ ಮಾಡಿಸುತ್ತಾನೆ.  ಪ್ರಕೃತಿಯ ಅಧಿದೇವತೆಯೇ ಲಕ್ಷ್ಮೀದೇವಿ. ಈಕೆ ಪರಮ ಸತ್ಯವಾದ ವಿಷ್ಣುವಿನ ಮಹಾರಾಣಿ. ದ್ವೈತದರ್ಶನದಲ್ಲಿ ಲಕ್ಷ್ಮಿಯೂ ಒಂದು ವಸ್ತುವಾಗಿದ್ದಾಳೆ. 

ವಿಷ್ಣು ಸಕಲಗುಣಪರಿಪೂರ್ಣನಾದುದರಿಂದ ಅಲ್ಪಜ್ಞನಾದ ಜೀವಿ ಆತನನ್ನು ಸಂಪೂರ್ಣವಾಗಿ ತನ್ನ ಬುದ್ಧಿಯಿಂದ ಅರಿಯಲಾರ.  ಹಾಗೆಂದ ಮಾತ್ರಕ್ಕೆ ವಿಷ್ಣು  ಪೂರ ಅಜ್ಞೇಯನೂ ಅಲ್ಲ ; ವೇದಗಳ ಮೂಲಕ ಆತನನ್ನು ಸ್ವಲ್ಪಮಟ್ಟಿಗಾದರೂ ಅರಿಯಬಹುದು.  
ವಿಶೇಷ: ದ್ವೈತ ದರ್ಶನದ ಬೆನ್ನೆಲುಬು ಭೇದವಲ್ಲದೆ ಮತ್ತೊಂದು ಇದೆ.  ಅದೇ ವಿಶೇಷ. ವಿಶೇಷ ದಶಪದಾರ್ಥಗಳಲ್ಲಿ ಒಂದು.  ಅದು ದ್ವೈತದರ್ಶನದ ಬಹಳ ಮುಖ್ಯವಾದ ಅಂಶ.  ಯಾವ ತತ್ತ್ವದಿಂದ ನಾವು ವಸ್ತು ಮತ್ತು ಅದರ ಗುಣಗಳನ್ನು (ಅವು ಪರಸ್ಪರ ಬೆರೆತಿದ್ದರೂ) ಬೇರ್ಪಡಿಸಲು ಸಾಧ್ಯವಾಗುವುದೋ ಅದೇ ವಿಶೇಷ.  ದೇವರು ಮತ್ತು ಆತನ ಸಕಲ ಗುಣಗಳ ನಡುವಿನ ಸಂಬಂಧ ಈ ವಿಶೇಷ ತತ್ತ್ವದ ಮೇಲೆ ಆಧರಿತವಾಗಿದೆ.  ದೇವರು ಮತ್ತು ಆತನ ಕಲ್ಯಾಣ ಗುಣಗಳ ನಡುವೆ ವಸ್ತುತಃ ವ್ಯತ್ಯಾಸಗಳಿಲ್ಲದಿದ್ದರೂ ವ್ಯವಹಾರಕ್ಕಾಗಿ ನಾವು ಆತನನ್ನು ಸಕಲಗುಣಗಳಿಂದ ಬೇರ್ಪಡಿಸುವುದು ರೂಢಿ. ಹೀಗೆ ಬೇರ್ಪಡಿಸಲು ಸಾಧ್ಯವಾಗಿರುವುದು ಈ ವಿಶೇಷ ತತ್ತ್ವದಿಂದಲೇ. 

ಜೀವ: ಜೀವ ಮೂಲಭೂತವಾಗಿ ವಿಷ್ಣುವಿನಿಂದ ಭಿನ್ನ.  ಆತ ದೇವರೇ ಅಲ್ಲ. ದೇವರ ಅನುಚರ ಮಾತ್ರ.  ಆತನಿಗೂ ದೇವರಿಗೂ ನಡುವೆ ಇರುವ ಸಂಬಂಧವೇ ಭೇದ.  ಆದರೆ ಜೀವಿಯೂ ಜಡವೂ ಭಗವಂತನಿಂದ ಭಿನ್ನರಾದರೂ ಅವುಗಳಿಗೆ ಸ್ವತಂತ್ರ ಅಸ್ತಿತ್ವವಿದೆ ಎಂದು ಭಾವಿಸಬಾರದು. ಬ್ರಹ್ಮ ಅಥವಾ ದೇವರೊಬ್ಬನೇ ಸ್ವತಂತ್ರ ಅಸ್ತಿತ್ವವುಳ್ಳವನು.  
ಜೀವರು ಅನೇಕ, ಅಗಣಿತ, ಪ್ರತಿಯೊಬ್ಬ ಜೀವಿಯೂ ಭಗವಂತನಿಂದ ಭಿನ್ನನಷ್ಟೇ ಅಲ್ಲ, ಇನ್ನಿತರ ಜೀವಿಗಳಿಂದಲೂ ಭಿನ್ನ.  ಜೀವಿ ಅಣು ಪ್ರಮಾಣದವ, ವಿಭುವಲ್ಲ. ತನ್ನ ಚಿತ್‍ಶಕ್ತಿಯಿಂದ, ಅಣುರೂಪಿಯಾದರೂ ತಾನು ಇರುವ ದೇಹವನ್ನೆಲ್ಲ ವ್ಯಾಪಿಸಿರುತ್ತಾನೆ.  ಜೀವಿ ಭಗವಂತನಂತೆಯೇ ಚಿದ್ರೂಪಿಯೂ ಆನಂದನೂ ಆಗಿದ್ದಾನೆ.  ಆದರೆ ಮಾತ್ರ ಆತನ ಈ ಗುಣಗಳು ಭಗವಂತನಿಗೆ ಹೋಲಿಸಿದಾಗ, ಪರಿಮಿತವಾಗಿವೆ.  ಜೀವಿ ಆನಂದ ಸ್ವರೂಪನಾದರೂ ತನ್ನ ಪೂರ್ವಜನ್ಮದ ಕರ್ಮದಿಂದ ಕಷ್ಟನಷ್ಟಗಳನ್ನೂ ಪುನರ್ಜನ್ಮವನ್ನೂ ಪಡೆದು ಸಂಸಾರಸಾಗರದಲ್ಲಿ ತೊಳಲಾಡುತ್ತಾನೆ.  ಆತ ಇತರ ಜೀವಿಗಳಿಂದ ಭಿನ್ನನಾಗಿರುವುದಷ್ಟೆ ಅಲ್ಲದೆ ಜಡದಿಂದಲೂ ಭಿನ್ನನಾಗಿದ್ದಾನೆ. ಜೀವಿಗಳಲ್ಲಿ ಮೂರು ವಿಧ.  1. ಮುಕ್ತರು:  ಇವರು ಸಾಧನೆಯ ಸಂಪತ್ತಿನಿಂದ ಭಗವಂತನ ಅನುಗ್ರಹವನ್ನು ಗಳಿಸಿಕೊಂಡು ಸಂಸಾರದಿಂದ ಉತ್ತೀರ್ಣರಾದವರು. 2.  ಬುದ್ಧಜೀವಿಗಳು: ಇವರ ಉದ್ಧಾರ ನಡೆದಿಲ್ಲ.  ಆದರೆ ಇವರಲ್ಲಿ ಕೆಲವರು ಸಾಧನದ ಮೂಲಕ ಮುಕ್ತಿಯನ್ನು ಗಳಿಸುವ ಅರ್ಹತೆಯನ್ನು ಪಡೆದಿದ್ದಾರೆ.  3.  ನಿತ್ಯನಾರಕಿಗಳು: ಈ ಕೆಲವು ಬದ್ಧರಿಗೆ ಈ ಅರ್ಹತೆ ಇಲ್ಲ.

ಜೀವಿ ಆನಂದಸ್ವರೂಪನಾದರೂ ಅe್ಞÁನದಿಂದ ಭಗವಂತನ ದಾಸ ತಾನು ಎಂದು ತಿಳಿಯದವನಾಗುತ್ತಾನೆ.  ಆದುದರಿಂದಲೇ ಸಂಸಾರಸಾಗರದಲ್ಲಿ ಮುಳುಗಿ ಕಷ್ಟನಷ್ಟಗಳನ್ನು ಅನುಭವಿಸುತ್ತಾನೆ.

ಮಧ್ವಾಚಾರ್ಯರ ತತ್ತ್ವ ವಸ್ತುನಿಷ್ಠವಷ್ಟೇ ಅಲ್ಲ; ಅದು ಅನೇಕಾಂತವಾದವೂ ಹೌದು.  ಮೋಕ್ಷಸ್ಥಿತಿಯಲ್ಲೂ ಒಬ್ಬ ಜೀವಿ ಇನ್ನೊಬ್ಬ ಜೀವಿಯಿಂದ ಭಿನ್ನನಾಗಿರುತ್ತಾನೆ.  ವಸ್ತುಗಳ ಅಸ್ತಿತ್ವ ಜೀವಿಯ ಆಕಾಂಕ್ಷೆಯ ಮೇಲೆ ನಿಂತಿಲ್ಲ. ವಸ್ತುಗಳು ಅನಾದಿಕಾಲದಿಂದ ಅಸ್ತಿತ್ವದಲ್ಲಿವೆ.

ಪ್ರಕೃತಿ (ಜಡ ತತ್ತ್ವ); ಎಲ್ಲ ವಸ್ತುಗಳೂ ಪ್ರಕೃತಿಯಿಂದ ಹೊರಬರುತ್ತವೆ. ತ್ರಿಗುಣಗಳಾದ ಸತ್ತ್ವ, ರಜಸ್ ಮತ್ತು ತಮಸ್‍ಗಳು ಮೊದಲು ಬರುವ ಪ್ರಕೃತಿಯ ಅಂಶಗಳು. ಈ ಗುಣಗಳಿಂದ ಮುಂದೆ ಬುದ್ಧಿ, ಅಹಂಕಾರ, ಮನಸ್ಸು, ದಶೇಂದ್ರಿಯಗಳು ಮತ್ತು ಪಂಚಮಹಾಭೂತಗಳು ಹೊರಬರುತ್ತವೆ.  ಫಲ ಎರಡು ರೀತಿಯಾಗಿದೆ; ಒಂದು- ಪರಿಣಾಮ, ಎರಡು - ಅಭಿವ್ಯಕ್ತಿ. ದ್ವೈತದರ್ಶನದಲ್ಲಿ ಹೇಳಿರುದ ಕಾರ್ಯಕಾರಣವನ್ನು ಸದಸದ್ ಕಾರಣವಾದ ಎಂದು ಕರೆಯುವರು.  ಈ ವಾದದ ಪ್ರಕಾರ ಫಲ ಕಾರಣವಾಗಿ ಕಂಡುಬರುವಾಗ ಅದನ್ನು ಫಲ ಎಂದು ಕರೆಯಲಾಗುವುದಿಲ್ಲ.  ಅದು ಕಾರಣವೇ ಆಗಿರುತ್ತದೆ.  ಒಟ್ಟಿನಲ್ಲಿ ಫಲ ಇದ್ದಂತೆಯೂ (ಫಲವಾಗಿ) ಇಲ್ಲದಂತೆಯೂ (ಕಾರಣರೂಪದಿಂದ) ಕಂಡುಬರುತ್ತದೆ.

ಜಗತ್ತು, ಪಾರಮಾರ್ಥಿಕ ಸತ್ಯ; ಅದು ಮಾಯೆಯಲ್ಲ. ಜೀವಿಗಳನ್ನು ಮೋಕ್ಷದ ಗುರಿಗೆ ತಯಾರುಮಾಡುವ ಕ್ಷೇತ್ರ ಅದು.  ಅದು ಭಗವಂತ ಹಾಗೂ ಜೀವಿಯಿಂದ ಭಿನ್ನವಾಗಿದೆ.  ಆದರೂ ಅದರ ಅಸ್ತಿತ್ವ ಬೆಳವಣಿಗೆ ಮುಂತಾದವುಗಳಿಗೆ ಭಗವಂತನ ದಯೆಯೇ ಕಾರಣ.

ದ್ವೈತ ದರ್ಶನ e್ಞÁನವನ್ನು ವಿವರಿಸುವಾಗಲೂ ವಸ್ತುನಿಷ್ಠವಾಗಿಯೇ ನಿಲ್ಲುತ್ತದೆ.  ಅದರ ಪ್ರಕಾರ ವಸ್ತುವಿಲ್ಲದೆ e್ಞÁನವಿಲ್ಲ.  ಒಂದು e್ಞÁನ ಸತ್ಯವಾಗಿದೆ ಎಂದು ಹೇಳಬೇಕಾದರೆ ಅದಕ್ಕನುಗುಣವಾದ ವಸ್ತುವಿರಬೇಕು.  e್ಞÁತೃ, ಜ್ಞೇಯ, e್ಞÁನ - ಎಲ್ಲವೂ ಸತ್ಯ. e್ಞÁನ ಭೇದವನ್ನು ಬೋಧಿಸುತ್ತದೆ. ವಸ್ತು ಇದ್ದಂತೆಯೇ ತಿಳಿಸುವ ಜ್ಞಾನ ಸತ್ಯವಾದದ್ದು.  ಸತ್ಯಜ್ಞಾನದ ಉಪಕರಣಗಳೇ ಪ್ರಮಾಣಗಳು.  ದ್ವೈತದರ್ಶನ ಮೂರು ಪ್ರಮಾಣಗಳನ್ನು ಮಾತ್ರ ಒಪ್ಪಿಕೊಳ್ಳುತ್ತದೆ.  ಅವು ಯಾವುದೆಂದರೆ : 1 ಪ್ರತ್ಯಕ್ಷ, 2 ಅನುಮಾನ ಮತ್ತು 3 ಆಗಮ.

	ಭಾರತೀಯ ತತ್ತ್ವಶಾಸ್ತ್ರಕ್ಕೆ ದ್ವೈತದರ್ಶನದ ಇನ್ನೊಂದು ವಿಶಿಷ್ಟ ಕೊಡುಗೆಯೆಂದರೆ ಸಾಕ್ಷಿತತ್ತ್ವದ ನಿರೂಪಣೆ.  ಸಾಕ್ಷಿ ಪ್ರತಿಯೊಂದು ಜೀವಿಯಲ್ಲೂ ಇರುತ್ತವೆ.  ಆಯಾ ಇಂದ್ರಿಯಗಳ ಮೂಲಕವೇ ಜೀವಿಯಾದವ ದೇಶ, ಕಾಲ ಮುಂತಾದವನ್ನು ಪ್ರತ್ಯಕ್ಷಿಸುತ್ತಾನೆ.  ವಿಶೇಷವೆಂಬುದು ಜೀವಿ ಮತ್ತು ಸಾಕ್ಷಿಗಳ ನಡುವಿನ ಸಂಬಂಧವಾಗಿದೆ.  ಸಾಕ್ಷಿಯನ್ನು ಜೀವಿಯಿಂದಲ್ಲದಿದ್ದರೂ ವಿಶೇಷ ತತ್ತ್ವದಿಂದ ಬೇರ್ಪಡಿಸಬಹುದು.  ಜ್ಞಾನ ಪ್ರಾಮಾಣ್ಯವನ್ನು ಸ್ಪಷ್ಟಪಡಿಸುವ ಮತ್ತು ಸಿದ್ಧಮಾಡುವ ತತ್ತ್ವವೇ ಸಾಕ್ಷಿ.  ಸಾಕ್ಷಿ ಜ್ಞಾನ ನಿರ್ದೋಷವಾದುದು.  ವೇದಗಳ ಮೂಲಕವೇ  ಭಗವಂತನನ್ನು ಅರಿಯಲು ಸಾಧ್ಯ.  ವೇದದ ಪರಮ ತಾತ್ಪರ್ಯ ವಿಷ್ಣುವಿನ ಸರ್ವೋತ್ಕರ್ಷವನ್ನು ಹೇಳುವುದು.

	ದ್ವೈತ ದರ್ಶನದ ಗುರಿ ಮೋಕ್ಷವನ್ನು ಪಡೆಯುವುದಾಗಿದೆ.  ಮೋಕ್ಷವೆಂದರೆ ಸ್ವರೂಪಾನಂದದ ಜ್ಞಾನಂ.  ಆತ್ಮ ತನ್ನ ನೈಜ ಸ್ವಭಾವವನ್ನು (ಆನಂದ) ಪಡೆಯುವುದೇ ಮೋಕ್ಷವೆನಿಸುವುದು.  ಇದಕ್ಕೆ ಸಾಧನ ಭಕ್ತಿ.

	ದ್ವೈತದರ್ಶನ ಪ್ರತಿಪಾದಿಸುವ ಮೋಕ್ಷದಲ್ಲಿ ನಾಲ್ಕು ಸೋಪಾನಗಳಿವೆ - ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ ಮತ್ತು ಸಾಯುಜ್ಯ.  ಭಗವಂತನ ಲೋಕವನ್ನು ಪ್ರವೇಶಿಸುವುದೇ ಸಾಲೋಕ್ಯಮುಕ್ತಿ.  ಅನಂತರ ಭಗವಂತನ ಎಡೆಗೆ ಧಾವಿಸುವುದೇ ಸಾಮೀಪ್ಯ ಮುಕ್ತಿ.  ಈ ಸಾಮೀಪ್ಯದಿಂದ ಭಗವಂತನ ರೂಪವನ್ನು ತನ್ನಲ್ಲಿ ಕಂಡುಕೊಳ್ಳುವುದೇ ಸಾರೂಪ್ಯಮುಕ್ತಿ.  ಮೋಕ್ಷಸ್ಥಿತಿಯ ಅಂತಿಮ ಅವಸ್ಥೆಯೇ ಸಾಯುಜ್ಯಮುಕ್ತಿ.  ಈ ಸ್ಥಿತಿಯಲ್ಲಿ ಜೀವಿ ಪರಮಾತ್ಮನ ದಯೆ, ಪ್ರೀತಿಗಳಿಗೆ ಪಾತ್ರನಾಗಿ ಸ್ವರೂಪಾನಂದವನ್ನು ಅನುಭವಿಸುತ್ತಾನೆ ಅಷ್ಟೆ;  ಭಗವಂತನಲ್ಲಿ ಐಕ್ಯನಾಗುವುದಿಲ್ಲ.  ಆ ಸ್ಥಿತಿಯಲ್ಲೂ ಭಗವಂತನಿಂದ ಭಿನ್ನನಾಗಿರುತ್ತಾನೆ.  ಭಗವಂತ ಸ್ವಾಮಿ ; ತಾನು ದಾಸ ಎಂಬ ಅರಿವಿನಿಂದ ಶಾಶ್ವತ ಸುಖವನ್ನು ಅನುಭವಿಸುತ್ತಾನೆ.

	ನಾರಾಯಣನ ಪ್ರಸಾದವಿಲ್ಲದೆ ಮುಕ್ತಿ ಸಾಧ್ಯವೇ ಇಲ್ಲ ಎಂದು ಮಧ್ವಾಚಾರ್ಯರು ನಿರ್ಣಾಯಿಕವಾಗಿ  ಹೇಳಿದ್ದಾರೆ(ನಾರಾಯಣಪ್ರಸಾದೇನ ಮೋಕ್ಷಃ).  ಜೀವಿ ಮೊದಲು ವೈರಾಗ್ಯವನ್ನು ಬೆಳೆಸಿಕೊಳ್ಳಬೇಕು.  ಮನಶ್ಯುದ್ಧಿಗೆ ನಿತ್ಯ ಕರ್ಮಗಳನ್ನು ಮಾಡಬೇಕು.  ಶ್ರವಣ, ಮನನ, ನಿದಿಧ್ಯಾಸನಗಳನ್ನು ಮುಂದುವರಿಸಬೇಕು.  ವೇದಗಳು ಭಗವಂತನನ್ನು ಅರಿಯಲು ಅತ್ಯಾವಶ್ಯಕ.  ಈ ಜ್ಞಾನ ಪ್ರತ್ಯಕ್ಷವಾದಾಗ, ಭಗವಂತನ ದಯೆಯಿಂದ ಮೋಕ್ಷ ಪ್ರಾಪ್ತವಾಗುತ್ತದೆ.  ಜ್ಞಾನ ಮೋಕ್ಷಕ್ಕೆ ಆವಶ್ಯಕವಾದರೂ ಭಕ್ತಿಯೇ ಅಂತಿಮ ಮಾರ್ಗ.  ಜೀವಿಯ ಭಕ್ತಿ ಶ್ರದ್ಧೆಗಳಿಂದ ಭಗವಂತ ಆಕರ್ಷಿತನಾಗಿ ತನ್ನ ಕರುಣಾ ಕಟಾಕ್ಷವನ್ನು ಜೀವಿಯ ಮೇಲೆ ಬೀರುತ್ತಾನೆ.  ದೇವರ ದಯೆ ಇಲ್ಲದೆ ಮೋಕ್ಷ ಪ್ರಾಪ್ತಿ ಸಾಧ್ಯವೇ ಇಲ್ಲ.  ಮೋಕ್ಷಶ್ಚ ವಿಷ್ಣುಪ್ರಸಾದೇನ ವಿನಾ ನ ಲಭ್ಯತೇ ಎಂದು ವಿಷ್ಣುತತ್ತ್ವ ನಿರ್ಣಯದಲ್ಲಿ ಒತ್ತಿ ಹೇಳಲಾಗಿದೆ.

	ಸತತವೂ ಹರಿಪಾದದಲ್ಲಿ ತಲೆಬಾಗಿ ವಂದಿಸು, ಹರಿಯೇ ಪರ, ಹರಿಯೇ ಗುರು, ಹರಿಯೇ ಜಗದ ಪಿತ, ಮಾತೆ, ಗತಿ, ಶ್ರೀಹರಿಗಿಂತ ಉತ್ತಮರು ಜಗತ್ತಿನಲ್ಲಿ ಅನ್ಯರಾರೂ ಇಲ್ಲ.  ಆದುದರಿಂದ ಲೋಕದ ಚಿಂತೆ ತೊರೆದು ಭಕ್ತಿಯಿಂದ ಪರಮ ಪುರುಷನ ಪಾದಗಳಿಗೆರಗಬೇಕೆಂಬುದು ಮಧ್ವಾಚಾರ್ಯರು ಜೀವಜಗತ್ತಿಗೆ ತಮ್ಮ ಸಂದೇಶವನ್ನು ನೀಡಿದ್ದಾರೆ.
	(ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ